ADVERTISEMENT

ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕರ ಟ್ರ್ಯಾಕ್ಟರ್‌ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 17:43 IST
Last Updated 16 ಡಿಸೆಂಬರ್ 2021, 17:43 IST
ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕರ ಟ್ರ್ಯಾಕ್ಟರ್‌ ರ್‍ಯಾಲಿ
ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕರ ಟ್ರ್ಯಾಕ್ಟರ್‌ ರ್‍ಯಾಲಿ   

ಬೆಳಗಾವಿ: ‘ರಾಜ್ಯ ಸರ್ಕಾರವು ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಮತ್ತು ಕಾಮಗಾರಿಗಳಿಗೆ ಟೆಂಡರ್‌ ನೀಡಲು ಶೇ 40ರಷ್ಟು ಲಂಚ ಪಡೆಯಲಾಗುತ್ತಿದೆ’ ಎಂದು ಆರೋಪಿಸಿ, ಕಾಂಗ್ರೆಸ್‌ ಶಾಸಕರು ಗುರುವಾರ ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಬಂದು ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಗರದ ಆರ್‌ಟಿಒ ವೃತ್ತ ಸಮೀಪದ ಕಾಂಗ್ರೆಸ್ ಭವನದಿಂದ 10 ಕಿ.ಮೀ.ವರೆಗೆ ರ‍್ಯಾಲಿ ನಡೆಸಿದ ಶಾಸಕರಿಗೆ ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಾಥ್‌ ನೀಡಿದರು. ಮಾರ್ಗದುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಮೊಳಗಿಸಿದರು.

ಗೇಟ್‌ನಲ್ಲಿ ಪ್ರತಿಭಟನೆ, ಆಕ್ರೋಶ: ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್‌ನಲ್ಲೇ ತೆರಳಲು ಪ್ರತಿಭಟನಾಕಾರರು ಮುಂದಾದರು. ಆಗ ಪೊಲೀಸರು ಗೇಟ್‌ಗಳನ್ನು ಬಂದ್‌ ಮಾಡಿ, ಬ್ಯಾರಿಕೇಡ್‌ ಕೋಟೆ ನಿರ್ಮಿಸಿ ತಡೆದರು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಹಾಗೂ ಮುಖಂಡರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಟ್ರ್ಯಾಕ್ಟರ್‌ ಮುಂದಿದ್ದ ಕಾರ್ಯಕರ್ತರು ಬ್ಯಾರಿಕೇಡ್‌ಗಳುಮತ್ತು ಪೊಲೀಸರ ಭದ್ರಕೋಟೆ ಹಾರಲು ಪ್ರಯತ್ನಿಸಿದರು. ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ADVERTISEMENT

‘ಬಿಜೆಪಿ ಲೂಟಿ ಸಾವಿರಾರು ಕೋಟಿ’ ಎಂಬ ಫಲಕ ಅಳವಡಿಸಲಾಗಿದ್ದ ಟ್ರ್ಯಾಕ್ಟರ್‌ನಲ್ಲೇ ಕುಳಿತ ನಾಯಕರು, ‘ಪ್ರವೇಶ ಸಿಗುವವರೆಗೂ ನಾವು ಕದಲುವುದಿಲ್ಲ’ ಎಂದು ಪಟ್ಟುಹಿಡಿದರು.

‘ಟ್ರ್ಯಾಕ್ಟರ್‌ಗೆ ಪಾಸ್ ಬೇಕು’ ಎಂಬ ಪೊಲೀಸರ ಮಾತಿಗೆ, ‘ನಾವು ಅಧಿವೇಶನಕ್ಕೆ ಹಾಜರಾಗಲು ಸರ್ಕಾರ ತೊಂದರೆ ನೀಡುತ್ತಿದೆ. ಟ್ರ್ಯಾಕ್ಟರ್‌ನಲ್ಲಿ ಹೋಗುತ್ತೀವೋ, ಬೇರೆ ವಾಹನದಲ್ಲೋ? ಕೇಳಲು ಅಥವಾ ತಡೆಯಲು ಇವರ‍್ಯಾರು? ವಿಧಾನಮಂಡಲ ಪ್ರವೇಶಿಸಲು ಬೇಕಾದ ಪಾಸ್‌ ಅನ್ನು ಜನರು ಕೊಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಭಯ:‘ವಿರೋಧ ಪಕ್ಷದವರನ್ನು ಹೊರಗಿಟ್ಟು ಮಸೂದೆಗಳನ್ನು ಪಾಸ್ ಮಾಡಿಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಹೀಗಾಗಿ ನಮ್ಮನ್ನು ತಡೆದಿದ್ದಾರೆ. ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ವ್ಯವಸ್ಥಿತವಾದ ಷಡ್ಯಂತ್ರ ನಡೆಸುತ್ತಿದ್ದಾರೆ. ವಿರೋಧ ಪಕ್ಷದವರು ಕಲಾಪದಲ್ಲಿ ಪಾಲ್ಗೊಂಡರೆ, ಸರ್ಕಾರದ ಭ್ರಷ್ಟಾಚಾರವನ್ನು ಬಿಚ್ಚಿಡುತ್ತಾರೆ ಎಂದು ಸರ್ಕಾರ ಹೆದರುತ್ತಿದೆ’ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಮಾರ್‌ ವಾಗ್ದಾಳಿ ನಡೆಸಿದರು. ತಾಸಿನವರೆಗೂ ಗೇಟ್‌ನಲ್ಲೇ ಪ್ರತಿಭಟನೆ ನಡೆಸಿದರು.

ಈ ನಡುವೆ, ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಶಾಸಕರಾದ ತನ್ವೀರ್‌ ಸೇಠ್, ಡಾ.ಅಂಜಲಿ ನಿಂಬಾಳ್ಕರ್, ಮೊದಲಾದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಹಲವು ಶಾಸಕರು ಬಾರದಿರುವುದರಿಂದ 10 ನಿಮಿಷಗಳವರೆಗೆ ಕಲಾಪ ಮುಂದೂಡಿರುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು. ಬಳಿಕ ಅವರ ಸೂಚನೆ ಮೇರೆಗೆ ಪೊಲೀಸರು ಟ್ರ್ಯಾಕ್ಟರ್‌ ಪ್ರವೇಶಕ್ಕೆ ಅವಕಾಶ ನೀಡಿದರು.

ಈ ರ‍್ಯಾಲಿಯಿಂದಾಗಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ತನಿಖೆಗೆ ಸಿದ್ದರಾಮಯ್ಯ ಆಗ್ರಹ
ಬೆಳಗಾವಿ:
‘ಶೇ 40ರಷ್ಟು ಲಂಚ ಬೇಡಿಕೆ ವಿಚಾರವಾಗಿ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸದನ ಸಮಿತಿ ರಚಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ನಮ್ಮದು (ಕಾಂಗ್ರೆಸ್) 10 ಪರ್ಸೆಂಟ್‌ ಸರ್ಕಾರ ಎಂದು ಮೋದಿ ದೂರಿದ್ದರು. ಅದನ್ನೂ ಸೇರಿಸಿ ಮೋದಿ ತನಿಖೆ ‌ಮಾಡಿಸಲಿ’ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ‘ಟ್ರ್ಯಾಕ್ಟರ್ ಪ್ರತಿಭಟನೆ ಮೂಲಕ ಸರ್ಕಾರದ ಮತ್ತು ಸಾರ್ವಜನಿಕರ ಗಮನಸೆಳೆದಿದ್ದೇವೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಅದಕ್ಕೆ ಪೂರಕವಾಗಿ ಗುತ್ತಿಗೆದಾರರು ಆರೋಪ ಮಾಡಿದ್ದಾರೆ’ ಎಂದರು.

‘ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳೂ ಸ್ಥಗಿತಗೊಂಡಿವೆ. ನೆರೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಕೇಂದ್ರದಿಂದ ಒಂದು ರೂಪಾಯಿಯೂ ಬಂದಿಲ್ಲ. ಕೋವಿಡ್‌ನಿಂದ ಮೃತಪಟ್ಟವರಿಗೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ’ ಎಂದು ದೂರಿದ ಅವರು, ‘ಬೆಳೆ ಪರಿಹಾರ ಮೊತ್ತವನ್ನು 3 ಪಟ್ಟು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾಯದೆ ನೀವೇ ಕೊಡಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.