ಬೆಳಗಾವಿ: ‘ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಇತಿಹಾಸದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿಯೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಸದಸ್ಯರು ನನ್ನನ್ನು ಬೆಂಬಲಿಸುವ ಮೂಲಕ ದಾಖಲೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಂದು ಅಧ್ಯಕ್ಷ ಸ್ಥಾನದ ಸ್ಪರ್ಧಿ ಡಾ.ಸರಸ್ವತಿ ಚಿಮ್ಮಲಗಿ ಕೋರಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದ ಮಹಿಳೆಯರು ಸಾಧನೆ ಮಾಡಿದ್ದಾರೆ. ಶತಮಾನ ಪೂರೈಸಿದ ಕಸಾಪ ಅಧ್ಯಕ್ಷೆಯನ್ನು ಕಂಡಿಲ್ಲ. ಈ ಕೊರತೆಯನ್ನು ನೀಗಿಸಲು ಮತದಾರರು ಮನಸ್ಸು ಮಾಡಬೇಕು’ ಎಂದು ಮನವಿ ಮಾಡಿದರು.
‘ಮೇ 9ರಂದು ನಿಗದಿಯಾಗಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ನಾನಾಗಿದ್ದೇನೆ. ಪರಿಷತ್ತಿಗೆ ಇದುವರೆಗೂ 25 ಮಂದಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಮಹಿಳಾ ಸಾಹಿತಿಗಳು ಇದ್ದರೂ ಒಮ್ಮೆಯೂ ಅವಕಾಶ ಸಿಕ್ಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಪರಿಷತ್ತಿನ ಎಲ್ಲ ಮಹಿಳಾ ಸದಸ್ಯರು ಹಾಗೂ ಮಹಿಳೆಯನ್ನು ಗೌರವಿಸುವ, ಅವರ ಶ್ರೇಯಸ್ಸು ಬಯಸುವ ಎಲ್ಲ ಪುರುಷರೂ ಬೆಂಬಲಿಸಿ ಗೆಲ್ಲಿಸಬೇಕು’ ಎಂದರು.
‘ನಾನು ಮಹಿಳೆ ಎನ್ನುವ ಕಾರಣಕ್ಕೆ ಮತ ಕೇಳುತ್ತಿಲ್ಲ. ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಕೃಷಿ ಮಾಡಿದ್ದೇನೆ. 30 ಕೃತಿಗಳನ್ನು ಬರೆದಿದ್ದೇನೆ. 100 ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ ಕಲಾ ಸೇವೆಯಲ್ಲೂ ತೊಡಗಿದ್ದೇನೆ. ಶೋಷಿತರ ಪರ ಹೋರಾಡಿದ್ದೇನೆ. ನೆಲ–ಜಲದ ವಿಷಯದಲ್ಲಿ ಧಕ್ಕೆಯಾದಾಗ ಹೋರಾಟ ನಡೆಸಿದ್ದೇನೆ. ಸಂಘಟಕಿ, ಲೇಖಕಿ, ಕಲಾವಿದೆಯಾಗಿ ಕನ್ನಡಕ್ಕೆ ಕೊಡುಗೆ ನೀಡಿದ್ದೇನೆ’ ಎಂದು ತಿಳಿಸಿದರು.
‘ಗೆದ್ದರೆ, ಕಸಾಪದ ಗೌರವ ಕಾರ್ಯದರ್ಶಿಯ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ಮೀಸಲಿಡುವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಒದಗಿಸುವೆ. ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವೆ. ಪರಿಷತ್ತಿನ ಉಪವಿಧಿಗಳಲ್ಲಿ ಮಹತ್ವದ ತಿದ್ದುಪಡಿ ಮಾಡುವೆ. ಸಾಕಷ್ಟು ಸಮ್ಮೇಳನಗಳನ್ನು ಆಯೋಜಿಸುವೆ. ಗಡಿ ನಾಡು ಸಮ್ಮೇಳನಗಳಿಗೆ ಹೆಚ್ಚಿನ ಆದ್ಯತೆ ಕೊಡುವೆ. ರಾಜ್ಯಮಟ್ಟದಿಂದ ಹಳ್ಳಿಗಳವರೆಗೆ ಸಾಹಿತ್ಯ ಸರಸ್ವತಿಯ ಕಂಪು ಹರಡುವಂತೆ ಮಾಡುವ ಯೋಜನೆ ಹೊಂದಿದ್ದೇನೆ’ ಎಂದು ಭರವಸೆ ನೀಡಿದರು.
ಲೇಖಕಿಯರಾದ ಜ್ಯೋತಿ ಬದಾಮಿ ಮತ್ತು ಡಾ.ಹೇಮಾ ಸೋನೋಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.