ADVERTISEMENT

ಖಾನಾಪುರ: ಚಿಕಿತ್ಸೆಗಾಗಿ ಮಹಿಳೆಯನ್ನು 10 ಕಿ.ಮೀ ಹೊತ್ತು ಸಾಗಿದರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:03 IST
Last Updated 20 ಜುಲೈ 2024, 16:03 IST
   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಭೀಮಗಡ ಅರಣ್ಯ ವ್ಯಾಪ್ತಿಯ ದಟ್ಟ ಅರಣ್ಯದಲ್ಲಿರುವ ಅಮಗಾಂವ ಗ್ರಾಮದಲ್ಲಿ ಶುಕ್ರವಾರ, ಎದೆನೋವು ಕಾಣಿಸಿಕೊಂಡ ಮಹಿಳೆಯೊಬ್ಬರಿಗೆ ಚಿಕಿತ್ಸೆ ಕೊಡಿಸಲು 10 ಕಿ.ಮೀ ಹೊತ್ತೊಯ್ಯಲಾಯಿತು.

ಹರ್ಷದಾ ಹರಿಶ್ಚಂದ್ರ ಘಾಡಿ (38) ಅವರಿಗೆ ಎದೆನೋವು ಕಾಣಿಸಿಕೊಂಡು, ನಡೆಯಲಾಗದಷ್ಟು ನಿತ್ರಾಣಗೊಂಡರು. ಗ್ರಾಮದಲ್ಲಿ ಆರೋಗ್ಯ ಕೇಂದ್ರವಿಲ್ಲ. ಕಾಡೊಳಗಿನ ಹಳ್ಳಿಗೆ ರಸ್ತೆಯೂ ಇಲ್ಲ. ಮುಖ್ಯ ರಸ್ತೆಯವರೆಗೆ 10 ಕಿ.ಮೀ ನಡೆದೇ ಹೋಗಬೇಕು. ಹೀಗಾಗಿ, ಗ್ರಾಮಸ್ಥರೇ ಕಟ್ಟಿಗೆಯ ಸ್ಟ್ರೆಚರ್‌ ಸಿದ್ಧಪಡಿಸಿ, ಅದರ ಮೇಲೆ ಮಹಿಳೆಯನ್ನು ಮಲಗಿಸಿ ಹೆಗಲ ಮೇಲೆ ಹೊತ್ತು ನಡೆದರು.

ಆರೋಗ್ಯ ಕವಚ (108) ಆಂಬುಲೆನ್ಸ್‌ ಬಂದರೂ ಗ್ರಾಮದವರೆಗೆ ರಸ್ತೆ ಇಲ್ಲ. ಹೀಗಾಗಿ ಚಿಕಲೆ ಬಳಿ ರಸ್ತೆ ಸಿಕ್ಕ ಬಳಿಕ ಆಂಬುಲೆನ್ಸ್‌ ಹತ್ತಿಸಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ಮಹಿಳೆಗೆ ನೀರು ತಾಗದಂತೆ ಪ್ಲಾಸ್ಟಿಕ್ ಚೀಲಗಳಿಂದ ಸುತ್ತಿ ಕರೆತಂದಿದ್ದಾರೆ. ಗ್ರಾಮದ 20 ಯುವಕರು ಸರದಿಯಂತೆ ಮಹಿಳೆಯನ್ನು ಹೊತ್ತುಕೊಂಡು ಜೀವ ಉಳಿಸಿದ್ದಾರೆ.

ADVERTISEMENT

ಅಮಟೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಮಗಾಂವ ಗ್ರಾಮವು ಬೆಳಗಾವಿ– ಚೋರ್ಲಾ ರಾಜ್ಯ ಹೆದ್ದಾರಿಯಿಂದ 15 ಕಿ.ಮೀ ದೂರದ ದುರ್ಗಮ ಅರಣ್ಯದಲ್ಲಿದೆ. ರಾಜ್ಯ ಹೆದ್ದಾರಿಯಿಂದ 5 ಕಿ.ಮೀ ದೂರದವರೆಗಿನ ಚಿಕಲೆ ಗ್ರಾಮದವರೆಗೆ ರಸ್ತೆ ಸಂಪರ್ಕವಿದೆ. ಅಲ್ಲಿಂದ ಅಮಗಾಂವ ಗ್ರಾಮಕ್ಕೆ ಕಾಲುದಾರಿಯೇ ದಿಕ್ಕು.

‘ಚಿಕಲೆ– ಅಮಗಾಂವ ಮಾರ್ಗಮಧ್ಯದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ಇಲ್ಲ. ನೀರಿನ ಹರಿವು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಮಳೆಗಾಲದಲ್ಲಿ ಈ ಊರು 3 ತಿಂಗಳು ನಡುಗಡ್ಡೆ ಆಗುತ್ತದೆ. ವಿದ್ಯುತ್, ಪಡಿತರ, ಮೊಬೈಲ್ ನೆಟ್‌ವರ್ಕ್ ಯಾವುದೂ ಇಲ್ಲಿ ಇಲ್ಲ. ಹೀಗಾಗಿ, ಮೂರು ತಿಂಗಳಿಗೆ ಬೇಕಾಗುವಷ್ಟ ಆಹಾರ ಸಾಮಗ್ರಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಚಿಕಿತ್ಸೆ ಸಿಗದೇ ಎಷ್ಟೋ ಜನ ಸತ್ತಿದ್ದಾರೆ’ ಎಂದು ಗ್ರಾಮಸ್ಥ ಅರ್ಜುನ ಗಾವಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.