ADVERTISEMENT

ಪುಂಡಾನೆ ದಾಳಿಗೆ ’ಅರ್ಜುನ’ನ ಸಾವು: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:08 IST
Last Updated 4 ಡಿಸೆಂಬರ್ 2023, 16:08 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಳಗಾವಿ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಮದಗಜವೊಂದು ‘ಅರ್ಜುನ’ನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

‘ಕಾರ್ಯಾಚರಣೆಯ ವೇಳೆಯಲ್ಲಿ ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ, ಪುಂಡಾನೆಯೊಂದಿಗೆ ಅರ್ಜುನ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಪಡೆದಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಯಸಳೂರು ವಲಯದಲ್ಲಿ ಹಲವು ಕಾಡಾನೆಗಳು ಬೀಡು ಬಿಟ್ಟಿದ್ದು, ಹಾಸನ ವಲಯದಲ್ಲಿ ಈವರೆಗೆ ನಡೆದ ಕಾರ್ಯಾಚರಣೆಯಲ್ಲಿ ಐದು ಕಾಡಾನೆಗಳನ್ನು ಹಿಡಿದು ರೇಡಿಯೊ ಕಾಲರ್ ಅಳವಡಿಸಲಾಗಿದೆ. ಆದರೂ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ಆನೆಗಳನ್ನು ಕಾಡಿಗೆ ಅಟ್ಟಲು, ಇಲ್ಲವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಒತ್ತಡ ಹೇರುತ್ತಿದ್ದರು. ಹೀಗಾಗಿ ಅರಣ್ಯ ಸಿಬ್ಬಂದಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಮತ್ತು ಸಿದ್ಧತೆಯೊಂದಿಗೆ ಅರ್ಜುನ ಸೇರಿದಂತೆ ನಾಲ್ಕು ಸಾಕು ಆನೆಗಳೊಂದಿಗೆ ಕಾರ್ಯಾಚರಣೆ ನಡೆಸುವಾಗ ಈ ದುರ್ಘಟನೆ ನಡೆದಿದೆ’ ಎಂದೂ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.