ಬೆಳಗಾವಿ: ಗೃಹ ರಕ್ಷಕ ಇಲಾಖೆಯ ಬೆಳಗಾವಿ ಜಿಲ್ಲಾ ಕಮಾಂಡೆಂಟ್ ಆಗಿದ್ದ ಕಿರಣ ಆರ್. ನಾಯ್ಕ ಅವರ ಮೇಲಿನ ಆರೋಪಗಳು ಸುಳ್ಳು ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ. ಅಲ್ಲದೇ, ಅಮಾನತು ಆದೇಶ ರದ್ದು ಮಾಡಿ ಅವರಿಗೆ ಮತ್ತೆ ಜಿಲ್ಲಾ ಕಮಾಂಡೆಂಟ್ ಹುದ್ದೆ ನೀಡಬೇಕು ಎಂದೂ ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಗೃಹ ರಕ್ಷಕ ದಳದ ಡಿಜಿಪಿ ಅವರಿಗೆ ನಿರ್ದೇಶನ ನೀಡಿದೆ.
ಕಿರಣ ಅವರು 2023ರ ಡಿಸೆಂಬರ್‌ನಲ್ಲಿ ಗೃಹ ರಕ್ಷಕ ದಳ ಇಲಾಖೆಯ ಜಿಲ್ಲಾ ಕಮಾಂಡೆಂಟ್ ಆಗಿದ್ದರು. ಹಣಕಾಸಿನ ಅವ್ಯವಹಾರ ಹಾಗೂ ಅಧಿಕಾರ ದುರುಪಯೋಗದ ಆರೋಪ ಮಾಡಿ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳ ಅವರ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸುವ ಮುನ್ನವೇ ಸರ್ಕಾರ ಅವರನ್ನು ಗೃಹ ಇಲಾಖೆ ಗೌರವ ಹುದ್ದೆಯಿಂದ ಅಮಾನತು ಮಾಡಿತ್ತು.
ಇದನ್ನು ಪ್ರಶ್ನಿಸಿ ಕಿರಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಆರೋಪಕ್ಕೆ ತಕ್ಕ ಸಾಕ್ಷ್ಯಗಳು, ಸಾಕ್ಷಿಗಳು ಇಲ್ಲ. ಇದೊಂದು ಸುಳ್ಳು ಆರೋಪ. ನಿಷ್ಕಾಮ ಸೇವೆ ಮಾಡುವ ಅಧಿಕಾರಿಗಳನ್ನು ಗೌರವ ದಿಂದ ನಡೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
‘ಜಿಲ್ಲೆಯ ಗೃಹ ರಕ್ಷಕ ಇಲಾಖೆಯಲ್ಲಿರುವ ಕೆಲವು ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿಕೊಂಡು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರು. ಅವರು ಮಾಡಿದ ನಕಲಿ ಸೇವೆ ಹಾಗೂ ನಕಲಿ ಗೃಹ ರಕ್ಷಕರ ಬಗ್ಗೆ ನಾನು ತನಿಖೆ ಮಾಡಿದ್ದೇ ಇದಕ್ಕೆ ಕಾರಣ. ನನ್ನದು ಗೌರವ ಸಂಭಾವನೆಯ ಹುದ್ದೆ ಮಾತ್ರ. ಯಾವುದೇ ಸಂಬಳವಿಲ್ಲ. ಹಾಗಿದ್ದ ಮೇಲೆ ನಾನು ಹೇಗೆ ಅಕ್ರಮ ನಡೆಸಲು ಸಾದ್ಯ ಎಂದು ಕೋರ್ಟಿನಲ್ಲಿ ಮನವರಿಕೆ ಮಾಡಿದೆ. ಹೈಕೋರ್ಟ್ ನನ್ನನ್ನು ನಿರಪರಾಧಿ ಎಂದು ಹೇಳಿದೆ. ಆದರೆ, ನನ್ನ ಗೌರವಕ್ಕೆ ಧಕ್ಕೆ ತಂದವರಿಗೆ ಶಿಕ್ಷೆ ಆಗಬೇಕು. ಹೋರಾಟ ಮುಂದುವರಿಸುತ್ತೇನೆ’ ಎಂದು ಕಿರಣ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.