ಚನ್ನಮ್ಮನ ಕಿತ್ತೂರು: 'ರಾಣಿ ಚನ್ನಮ್ಮನ 200ನೇ ವಿಜಯೋತ್ಸವ ಪ್ರಯುಕ್ತ, ಬೆಳಗಾವಿಯಲ್ಲಿ ಒಂದು ದಿನ, ಇಲ್ಲಿನ ಕೋಟೆ ಆವರಣದಲ್ಲಿ ನಾಲ್ಕು ದಿನ ಸೇರಿ ಐದು ದಿನಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು' ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಿತ್ತೂರು ಉತ್ಸವ ಸಿದ್ಧತೆಯನ್ನು ಸೋಮವಾರ ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ದಿನ, ಕಿತ್ತೂರಲ್ಲಿ ನಾಲ್ಕು ದಿನ ಉತ್ಸವದ ವೈವಿಧ್ಯಮ ಕಾರ್ಯಕ್ರಮಗಳು ಜರುಗಲಿವೆ. 25ಕ್ಕೆ ಉತ್ಸವದ ಸಮಾರೋಪ ಕಾರ್ಯಕ್ರಮವಿದೆ. ಅನಂತರ ಅ. 26ರಂದು ಅದೇ ಶಾಮಿಯಾನದಲ್ಲಿ ಉತ್ಸವದ ನಿಮಿತ್ತ ಸ್ಥಳೀಯ ಭಜನಾ ತಂಡಗಳಿಗೆ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ವಿವರಿಸಿದರು.
‘ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹50,000, ದ್ವಿತೀಯ ₹25,000 ಮತ್ತು ತೃತೀಯ ₹15,000 ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಉತ್ಸವದ ಯಶಸ್ಸಿಗಾಗಿ ಅಧಿಕಾರಿಗಳು ಸೇರಿ ಎಲ್ಲರೂ ಶ್ರಮ ವಹಿಸುತ್ತಿದ್ದಾರೆ. ಅಧಿಕ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.
ನಿಲ್ಲದ ಮಳೆ: ಉತ್ಸವ ಸಿದ್ಧತೆ ಆರಂಭಗೊಂಡ ದಿನದಿಂದಲೂ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಅಗತ್ಯ ಕೆಲಸಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ರಸ್ತೆಯ ಕೆಲ ಕಡೆ ನೀರು ಸಂಗ್ರಹವಾಗಿದ್ದು, ಗುರುವಾರ ಪೇಟೆಯ ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣಕ್ಕೆ ತೊಂದರೆ ಆಗಿದೆ.
ಶಾಮಿಯಾನ ನಿರ್ಮಾಣದ ಗುತ್ತಿಗೆದಾರರೂ ಮಳೆಯಿಂದ ತೊಂದರೆ ಅನುಭವಿಸಿದರು. ರಾಡಿಮಯವಾಗಿದ್ದ ಮೈದಾನ ಸ್ವಚ್ಛಗೊಳಿಸಲು ಹರಸಾಹಸಪಟ್ಟರು. ಸೋಮವಾರವೂ ಬೆಳಿಗ್ಗೆ ಮತ್ತು ಸಂಜೆ ಮಳೆ ಸುರಿದಿದ್ದರಿಂದ ಅಂತಿಮ ಸಿದ್ಧತೆಗಳು ಮತ್ತು ಕುಸ್ತಿ ಮೈದಾನ ನಿರ್ಮಾಣಕ್ಕೆ ತೊಂದರೆಯುಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.