ADVERTISEMENT

ಬೆಳಗಾವಿ | ಕಿತ್ತೂರಿಗೆ ಬಂತು ದಿಬ್ಬಣದ ಸಡಗರ; ಮಕ್ಕಳಿಗೂ ಉತ್ಸವದ ಸಿಹಿ

ಮೂರು ದಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

ಪ್ರದೀಪ ಮೇಲಿನಮನಿ
Published 23 ಅಕ್ಟೋಬರ್ 2024, 4:57 IST
Last Updated 23 ಅಕ್ಟೋಬರ್ 2024, 4:57 IST
ಕಿತ್ತೂರು ಉತ್ಸವ ಅಂಗವಾಗಿ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ರಾಣಿ ಚನ್ನಮ್ಮನ ವೃತ್ತ
ಕಿತ್ತೂರು ಉತ್ಸವ ಅಂಗವಾಗಿ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ರಾಣಿ ಚನ್ನಮ್ಮನ ವೃತ್ತ   

ಚನ್ನಮ್ಮನ ಕಿತ್ತೂರು: ವರುಣನ ಅಡೆತಡೆ ಮಧ್ಯೆಯೂ ರಾಣಿ ಚನ್ನಮ್ಮನ 200ನೇ ವಿಜಯೋತ್ಸವ ಆಚರಣೆಗೆ ‘ಕ್ರಾಂತಿಯ ನೆಲ’ ಕಿತ್ತೂರು ಪಟ್ಟಣ ಸಜ್ಜಾಗಿದೆ. ಅ.23ರಿಂದ 25ರ ವರೆಗೆ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕೋಟೆ ಆವರಣ ಸಾಕ್ಷಿಯಾಗಲಿದೆ.

ಇಡೀ ಪಟ್ಟಣ ನವವಧುವಿನಂತೆ ಕಂಗೊಳಿಸುತ್ತಿದ್ದು, ದಿಬ್ಬಣದ ಸಡಗರ ಮನೆಮಾಡಿದೆ. ರಾಷ್ಟ್ರೀಯ ಹೆದ್ದಾರಿ ಬದಿಗಿರುವ ಅಶ್ವಾರೂಢ ರಾಣಿ ಚನ್ನಮ್ಮನ ಪ್ರತಿಮೆ, ಸೋಮವಾರ ಪೇಟೆಯ ಹೃದಯಭಾಗದಲ್ಲಿನ ಪ್ರತಿಮೆ ಕಳೆಗಟ್ಟುವಂತೆ ರೂಪಿಸಲಾಗಿದೆ.

ಮಕ್ಕಳು ಕೂಡ ಈ ವೈಭವ ಕಣ್ತುಂಬಿಕೊಳ್ಳಿ ಎಂಬ ಕಾಣಕ್ಕೆ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.

ADVERTISEMENT

ಹೆದ್ದಾರಿ ಸೇತುವೆ ಒಳಭಾಗ ಮತ್ತು ಪಕ್ಕದ ಗೋಡೆಗಳ ಮೇಲೆ ಇತಿಹಾಸ ಬಿಂಬಿಸುವ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರು ಪಟ್ಟಣದಾದ್ಯಂತ ವಿಶೇಷ ರೀತಿಯಲ್ಲಿ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದೆ. ಇಡೀ ಊರಿನ ಇಕ್ಕೆಲಗಳು, ಗುಡಿಗಳು, ಗಿಡಗಳು, ಕೋಟೆಯೊಳಗಿನ ಬತ್ತೇರಿ, ಸರ್ಕಾರಿ ಕಟ್ಟಡಗಳು ಬೆಳಕು ಅರಳಿಸಿಕೊಂಡು ಝಗಮಗಿಸುತ್ತಿವೆ.

ಉತ್ಸವದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಬರುವ ವೀಕ್ಷಕರಿಗಾಗಿ ಕೋಟೆ ಆವರಣದಲ್ಲಿ 50,400 ಚದರ ಅಡಿ ವಿಸ್ತೀರ್ಣದಲ್ಲಿ ವಿಶಾಲವಾದ ಜಲನಿರೋಧಕ ಶಾಮಿಯಾನ ಹಾಕಲಾಗಿದೆ. ಇದಕ್ಕೆ ‘ರಾಣಿ ಚನ್ನಮ್ಮ ಮುಖ್ಯವೇದಿಕೆ’ ಎಂದು ಹೆಸರಿಡಲಾಗಿದೆ. ಅಲ್ಲದೆ, ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುಸಿದ್ದಪ್ಪ ಸರದಾರ ವೇದಿಕೆ ನಿರ್ಮಿಸಲಾಗಿದೆ. ಕಿತ್ತೂರು ಪಟ್ಟಣ ಸಂಪರ್ಕಿಸುವ 10 ವಿವಿಧ ಕಡೆ ಸ್ವಾಗತ ಕಮಾನು ತಲೆ ಎತ್ತಿನಿಂತಿವೆ.

‘ವಿಜಯಜ್ಯೋತಿ’ಗೆ ಸ್ವಾಗತ: ರಾಜಧಾನಿ ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಅವರಿಂದ ಬೀಳ್ಕೊಟ್ಟ ವಿಜಯಜ್ಯೋತಿ ಯಾತ್ರೆಯು ರಾಜ್ಯದ ವಿವಿಧೆಡೆ ಸಂಚರಿಸಿ, ಮಂಗಳವಾರ ರಾತ್ರಿ ಇಲ್ಲಿಯ ಬಾಲಕಿಯರ ವಸತಿ ಶಾಲೆಗೆ ಬಂದು ತಂಗಿದೆ. ಬುಧವಾರ ಅದ್ದೂರಿಯಾಗಿ ಅದನ್ನು ಸ್ವಾಗತಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಕಿತ್ತೂರು ಉತ್ಸವ ಅಂಗವಾಗಿ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಮಹಾದ್ವಾರ
ಚನ್ನಮ್ಮನ ಕಿತ್ತೂರಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಉತ್ಸವ ಸಿದ್ಧತೆ ಪರಿಶೀಲಿಸಿದರು. ಶಾಸಕ ಬಾಬಾಸಾಹೇಬ ಪಾಟೀಲ ಇದ್ದರು

ಬಿಗಿ ಬಂದೋಬಸ್ತ್

ಕಿತ್ತೂರು ಉತ್ಸವ ಅಂಗವಾಗಿ ಪೊಲೀಸ್‌ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಇಬ್ಬರು ಡಿವೈಎಸ್‌ಪಿ 9 ಸಿಪಿಐ 26 ಪಿಎಸ್ಐ 56 ಎಎಸ್ಐ 500 ಪೊಲೀಸರು ಡಿಎಆರ್ ಮತ್ತು ಕೆಎಸ್‌ಆರ್‌ಪಿಯ ತಲಾ ನಾಲ್ಕು ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಜನಸಂದಣಿ ಅಧಿಕವಿರುವ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಬಾರಿ ನಿರ್ಮಿಸಿರುವ ಸುಸಜ್ಜಿತ ಮಾಧ್ಯಮ ಕೇಂದ್ರ ಹೆಚ್ಚು ಗಮನ ಸೆಳೆಯುತ್ತಿದೆ.

ಖ್ಯಾತನಾಮರ ಸಾಂಸ್ಕೃತಿಕ ಕಾರ್ಯಕ್ರಮ

ಅ.23ರಂದು ಸಂಜೆ ಚಂದನವನ ನಟ ದಿಗಂತ ಐಂದ್ರಿತಾ ರೇ ಚಂದನ ಶೆಟ್ಟಿ ಅವರ ರಸಮಂಜರಿ ಜೀ ಕನ್ನಡ ಖ್ಯಾತಿಯ ಕಾಮಿಡಿ ಕಿಲಾಡಿಗಳ ಪ್ರದರ್ಶನ ಸಂಗೀತ ಕಾರ್ಯಕ್ರಮವಿದೆ. 24ರಂದು ಸಂಜೆ ಪ್ರವೀಣ ಗೋಡ್ಖಿಂಡಿ ಅವರ ಕೊಳಲುವಾದನ ಹಿನ್ನೆಲೆ ಗಾಯಕ ವಿಜಯಪ್ರಕಾಶ ಅವರ ರಸಮಂಜರಿ ನೃತ್ಯರೂಪಕ ಕುಚಿಪುಡಿ ನೃತ್ಯ ಹಾಸ್ಯ ಹಾಗೂ ಬೆಳಗಾವಿ ಮೈತ್ರಿ ಲೇಡಿಸ್ ಆಫೀಸರ್ಸ್‌ ನೃತ್ಯ ವೈವಿಧ್ಯವಿದೆ. 25ರಂದು ಸಂಜೆ ಬಾಲಿವುಡ್ ಗಾಯಕ ಅರ್ಮನ್ ಮಲಿಕ್ ತಂಡದ ರಸಮಂಜರಿ ಮಿಮಿಕ್ರಿ ಗೋಪಿ ಹಾಸ್ಯ ಜಸ್‌ಕರಣ ದಿವ್ಯಾ ರಾಮಚಂದ್ರನ್ ಸ್ಯಾಂಡಲ್‌ವುಡ್‌ ಗಾಯಕರಿಂದ ರಸಮಂಜರಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.