ಬೆಳಗಾವಿ: ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳವಾದ ತಾಲ್ಲೂಕಿನ ಕಾಕತಿ ಗ್ರಾಮದಲ್ಲೂ ಬುಧವಾರ ಸಂಭ್ರಮದಿಂದ ಕಿತ್ತೂರು ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ರಾಣಿ ಚನ್ನಮ್ಮನ ಇತಿಹಾಸವನ್ನು ನಾಡಿನುದ್ದಗಲಕ್ಕೂ ಸಾರುವ ಉದ್ದೇಶದಿಂದ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಇದು ವೀರರಾಣಿಯ ಐತಿಹಾಸಿಕ ಹೋರಾಟದ ಮಹತ್ವ ಸಾರಲಿದೆ’ ಎಂದರು.
‘ಕಾಕತಿಯಿಂದಲೇ ರಾಣಿ ಚನ್ನಮ್ಮನ ಇತಿಹಾಸ ಆರಂಭವಾಗುವ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಕಿತ್ತೂರು ಉತ್ಸವವನ್ನು ಕಾಕತಿಯಲ್ಲಿ ಸಾಂಕೇತಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ತಾಲ್ಲೂಕು ಕೇಂದ್ರಗಳಲ್ಲೂ ಕಿತ್ತೂರಿನ ಇತಿಹಾಸ ಸಾರುವ ಕಾರ್ಯಕ್ರಮ ಆಯೋಜಿಸಲಾಗುವುದು. ಕಿತ್ತೂರು ಹಾಗೂ ಕಾಕತಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಸಿದ್ದಗೌಡ ಸುಣಗಾರ, ಅಯ್ಯಪ್ಪ ಕೋಳೇಕರ, ಎಸ್.ಡಿ.ಪಾಟೀಲ ಮಾತನಾಡಿದರು. ಗುರುದೇವಿ ಹುಲೆಪ್ಪನವರಮಠ ಉಪನ್ಯಾಸ ನೀಡಿದರು.
ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಕತಿಯ ಉದಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಆಸಿಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗ್ರಾ.ಪಂ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿ.ಪಂ ಸಿಇಒ ರಾಹುಲ್ ಶಿಂಧೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಭವ್ಯವಾದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.