ADVERTISEMENT

ಬೆಳಗಾವಿ | ಕಿತ್ತೂರು ಉತ್ಸವ: ಉದ್ಯಮಿ ಹೆಸರು ಚರ್ಚಾಸ್ಪದ

ಸಂತೋಷ ಈ.ಚಿನಗುಡಿ
Published 23 ಅಕ್ಟೋಬರ್ 2024, 4:59 IST
Last Updated 23 ಅಕ್ಟೋಬರ್ 2024, 4:59 IST
<div class="paragraphs"><p>ಸಂಜಯ ಘೋಡಾವತ್‌<br></p></div>

ಸಂಜಯ ಘೋಡಾವತ್‌

   

ಬೆಳಗಾವಿ: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥಾಪಕ ಸಂಜಯ ಘೋಡಾವತ್‌ ಅವರ ಹೆಸರು ಸೇರಿಸಿದ ವಿಷಯ ಚರ್ಚೆಗೆ ಕಾರಣವಾಗಿದೆ. ಕಿತ್ತೂರು ಚನ್ನಮ್ಮನ ಪರಿವಾರದವರ ಹೆಸರನ್ನೇ ಕೈಬಿಟ್ಟು, ಸಂಬಂಧವೇ ಇಲ್ಲದ ಮಹಾರಾಷ್ಟ್ರದ ಉದ್ಯಮಿಯನ್ನು ಆಹ್ವಾನಿಸಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ.

ಅ.25ರಂದು ರಾತ್ರಿ 8ಕ್ಕೆ ನಡೆಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂಜಯ ಘೋಡಾವತ್‌ ವಿಶೇಷ ಆಹ್ವಾನಿತರಾಗಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅವರಿಂದ ಸಂಜಯ ಅವರಿಗೆ ಸನ್ಮಾನಿಸುವ ಉದ್ದೇಶವಿದೆ.

ADVERTISEMENT

‘ಉತ್ಸವಕ್ಕೆ ಉದ್ಯಮಿಗಳಿಂದ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿ ಅವರನ್ನು ಆಹ್ವಾನಿಸಲಾಗಿದೆ’ ಎಂಬ ಆರೋಪವೂ ಕೇಳಿಬಂದಿದೆ.

‘ಕಿತ್ತೂರಿನಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸುವ ಉದ್ದೇಶವಿದೆ. ಐತಿಹಾಸಿಕ ಕೋಟೆ ಅಭಿವೃದ್ಧಿಪಡಿಸಿ, ನಿರ್ವಹಣೆಗೆ ಕೊಡಬೇಕಿದೆ. ಈ ಜವಾಬ್ದಾರಿ ಹೊತ್ತುಕೊಳ್ಳಲು ಸಂಜಯ ಮುಂದೆ ಬಂದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸಂಜಯ ಅವರು ಕಿತ್ತೂರು ವ್ಯಾಪ್ತಿಯಲ್ಲಿ ಕಾರ್ಖಾನೆ ಆರಂಭಿಸಲಿದ್ದಾರೆ. ಅದರಿಂದ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕಿತ್ತೂರು ಉತ್ಸವ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಿ, ಉದ್ಯಮ ಸ್ಥಾಪನೆಯ ಪ್ರಸ್ತಾವ ನೀಡುವ ಉದ್ದೇಶವಿದೆ’ ಎಂದೂ ಮೂಲಗಳು ಹೇಳಿವೆ.

ಸಂಜಯ ಅವರ ಹೆಸರಿನ ಕೆಳಗೆ ‘ವಿವಿಧ ಸಾಧಕರಿಗೆ ಹಾಗೂ ಕಿತ್ತೂರು ಚನ್ನಮ್ಮನ ವಂಶಸ್ಥರಿಗೆ ಸನ್ಮಾನ’ ಎಂಬ ಸಾಲು ಬರೆಯಲಾಗಿದೆ. ಆದರೆ, ಚನ್ನಮ್ಮನ ವಂಶಸ್ಥರು ಅಥವಾ ಪರಿವಾರದವರ ಯಾರೊಬ್ಬರ ಹೆಸರನ್ನೂ ಪ್ರಕಟಿಸಿಲ್ಲ.

‘ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರಿಲ್ಲ. ಸಂಬಂಧವೇ ಇಲ್ಲದವರ ಹೆಸರು ಸೇರಿಸಿದ್ದಾರೆ. ನಮಗೆ ಸೌಜನ್ಯಕ್ಕೆ ಆಹ್ವಾನ ಪತ್ರಿಕೆಯನ್ನೂ ನೀಡಿಲ್ಲ. ಚನ್ನಮ್ಮನ ಪರಿವಾರದವರಾದ ನಾವು ಈ ಉತ್ಸವ ಬಹಿಷ್ಕರಿಸುತ್ತೇವೆ’ ಎಂದು ಉದಯ ದೇಸಾಯಿ ಎಂಬುವರು ತಿಳಿಸಿದ್ದಾರೆ.

ಕಿತ್ತೂರು ಉತ್ಸವದ 200ನೇ ವರ್ಷಾಚರಣೆ ಆಹ್ವಾನ ಪತ್ರಿಕೆಯಲ್ಲಿ ಉದ್ಯಮಿ ಸಂಜಯ ಘೋಡಾವತ್‌ ಹೆಸರು ಸೇರಿಸಿದ್ದು ಈಗ ಗೊತ್ತಾಗಿದೆ. ಏಕೆ ಆಹ್ವಾನಿಸಿದ್ದಾರೆ ಎಂದು ಪರಿಶೀಲಿಸುತ್ತೇನೆ
-ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.