ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಾಗೂ ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಹೊಸಕಳೆ ಬಂದಿದ್ದು, ಹೆದ್ದಾರಿ ಕೆಳ ಸೇತುವೆಯ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹಾಗೂ ಇತಿಹಾಸ ಬಿಂಬಿಸುವ ಕೆಲವು ಸನ್ನಿವೇಶ, ಚಿತ್ರಗಳು ಜೀವ ಪಡೆದಿದ್ದು, ಕಿತ್ತೂರು ಕಳೆಗಟ್ಟಿದೆ.
ಇಲ್ಲಿನ ಕೋಟೆ ಆವರಣದಲ್ಲಿ ಅ. 23ರಿಂದ 25 ರ ವರೆಗೆ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಕಲಾಕೃತಿಗಳು ಜೀವತಳೆದಿವೆ.
ಅಶ್ವಾರೂಢ ಚನ್ನಮ್ಮನ ಪ್ರತಿಮೆಗೆ ಹಲವಾರು ಬಾರಿ ಬಣ್ಣ ಬಳಿದಿದ್ದರೂ ದಪ್ಪನೆಯ ರೂಪ ತಾಳಿತ್ತು. ಇದನ್ನು ಮನಗಂಡ ಶಾಸಕ ಬಾಬಾಸಾಹೇಬ ಪಾಟೀಲ ಅದಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಕೇರಳದ ಕಲಾವಿದರನ್ನು ಈ ಕಾರ್ಯಕ್ಕಾಗಿ ಕರೆಯಿಸಲಾಗಿದ್ದು, ಪುತ್ಥಳಿಗೆ ಹೊಸ ರೂಪ ನೀಡಿ, ಗೋಡೆಗಳಿಗೆ ಹೊಸ ಮೆರುಗು ನೀಡಿದ್ದಾರೆ. ಇನ್ನ ೂಕೆಲ ಕೆಲಸಗಳು ಬಾಕಿ ಉಳಿದಿದ್ದು, ಸೋಮವಾರ ಮುಕ್ತಾಯವಾಗಲಿವೆ.
ಪೆಂಡಾಲ್ ಸಿದ್ಧಪಡಿಸುವುದು, ಪಟ್ಟಣಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಈ ಬಾರಿ ಬೇಗ ಮುಗಿಸಲಾಗಿದೆ. ಗಿಡಗಳಲ್ಲಿ ಬೆಳಕು ಅರಳಿದೆ. ಕೋಟೆ ಆವರಣ, ಸೋಮವಾರ ಪೇಟೆ ಮತ್ತು ಗುರುವಾರ ಪೇಟೆ, ಕೋಟೆ ಆವರಣದಲ್ಲಿ ಲೈಟ್ ಸರಮಾಲೆಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಚನ್ನಮ್ಮನ ವೃತ್ತವೂ, ಪುತ್ಥಳಿಯ ಬಳಿ ಮಾಡಿರುವ ಲೈಟ್ ವ್ಯವಸ್ಥೆಯು ಸಾರ್ವಜನಿಕರನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡಿದೆ.
ಶಾಸಕರ ಇಚ್ಚೆಯಂತೆ ಸ್ಥಳದಲ್ಲಿದ್ದು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸಂಗೊಳ್ಳಿ ಉಸ್ತುವಾರಿ ನೋಡಿಕೊಂಡರು. ಮುಖಂಡ ಆಶ್ಫಾಕ್ ಹವಾಲ್ದಾರ್ ಬೆಂಗಾವಲಾಗಿ ನಿಂತಿದ್ದರು.
‘ಪೆಂಡಾಲ್ ನಿರ್ಮಾಣ ಮತ್ತು ಚಿತ್ರ ಬಿಡಿಸುವ ಅಲ್ಪ ಕೆಲಸ ಮಾತ್ರ ಬಾಕಿ ಉಳಿದಿದ್ದು, ಸೋಮವಾರ ಮುಕ್ತಾಯಗೊಳ್ಳುತ್ತವೆ. ಪಟ್ಟಣದಲ್ಲಿ ಸುರಿದ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕೃಷ್ಣ ಬಾಳೇಕುಂದರಗಿ ಹೇಳಿದರು.
ಗೋಡೆ ಮೇಲೆ ರಚಿಸಿರುವ ಇತಿಹಾಸ ಬಿಂಬಿಸುವ ಚಿತ್ರಗಳು ಹಲವು ದಶಕದ ವರೆಗೆ ಇರಲಿವೆ ಎನ್ನುತ್ತಾರೆ ಕಲಾವಿದರು. ಇದು ವೃತ್ತದ ಅಂದ ಹೆಚ್ಚಲು ಕಾರಣವಾಗಿದೆಬಾಬಾಸಾಹೇಬ ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.