ಚನ್ನಮ್ಮನ ಕಿತ್ತೂರು: ಇಲ್ಲಿ ಪ್ರತಿವರ್ಷ ಕಿತ್ತೂರು ಉತ್ಸವದಲ್ಲಿ ಆಯೋಜಿಸುತ್ತಿದ್ದ ಸೈಕ್ಲಿಂಗ್ ಟೂರ್ನಿಗೆ ಈ ಬಾರಿ ‘ಕೊಕ್’ ನೀಡಿರುವುದು ಸೈಕ್ಲಿಸ್ಟ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ.
‘ಈ ಸಲದ ಉತ್ಸವದಲ್ಲಿ ಸೈಕ್ಲಿಂಗ್ ಬದಲಿಗೆ, ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಬೇಕೆಂಬ ಒತ್ತಾಯ ಉತ್ಸವ ಸಮಿತಿಯವರಿಂದ ಕೇಳಿಬಂತು. ಹಾಗಾಗಿ ಸೈಕ್ಲಿಂಗ್ ಸ್ಪರ್ಧೆ ಕೈಬಿಟ್ಟಿದ್ದೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ ತಿಳಿಸಿದ್ದಾರೆ.
‘ಇದು ಕಿತ್ತೂರು ಉತ್ಸವದ 200ನೇ ವರ್ಷದ ಸಂಭ್ರಮಾಚರಣೆಯ ಕಾಲ. ಉತ್ಸವಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಅನುದಾನವೂ ಬಂದಿದೆ. ಹಾಗಾಗಿ ಸೈಕ್ಲಿಂಗ್‌ನೊಂದಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನೂ ಆಯೋಜಿಸಿ ಕ್ರೀಡಾಪ್ರೇಮಿಗಳನ್ನು ಸೆಳೆಯಬೇಕಿತ್ತು. ಆದರೆ, ಒಂದು ಸ್ಪರ್ಧೆಗಾಗಿ ಮತ್ತೊಂದು ಸ್ಪರ್ಧೆ ಆಯೋಜನೆಯಿಂದ ಹಿಂದೆ ಸರಿದಿದ್ದು ಸರಿಯಲ್ಲ’ ಎಂಬುದು ಸೈಕ್ಲಿಸ್ಟ್‌ಗಳ ದೂರು.
‘ಸರ್ಕಾರದಿಂದ ಕಿತ್ತೂರು ಉತ್ಸವ ನಡೆಸುತ್ತಿರುವ ವರ್ಷದಿಂದಲೂ ಇಲ್ಲಿ ಸೈಕ್ಲಿಂಗ್ ಟೂರ್ನಿ ನಡೆಯುತ್ತಿತ್ತು. ಪುರುಷರು ಹಾಗೂ ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧೆಡೆಯ ಪಟುಗಳು ಪಾಲ್ಗೊಳ್ಳುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಸೈಕ್ಲಿಸ್ಟ್‌ಗಳಿಗೆ ತಮ್ಮ ಪ್ರತಿಭೆ ಅನಾವರಣಕ್ಕೆ ಇದು ವೇದಿಕೆಯಾಗಿತ್ತು. ಆದರೆ, ಈ ಬಾರಿ ಏಕಾಏಕಿಯಾಗಿ ಸ್ಪರ್ಧೆ ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ’ ಎಂದು ಬೆಳಗಾವಿಯ ಸೈಕ್ಲಿಂಗ್ ತರಬೇತುದಾರ ಎಂ.ಪಿ.ಮರನೂರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.