ADVERTISEMENT

ರಾಷ್ಟ್ರಮಟ್ಟದ ಹಬ್ಬವಾಗಲಿ ಕಿತ್ತೂರು ಉತ್ಸವ: ಪ್ರಧಾನಿಗೆ ಮನವಿ –ಸಂಸದ ಕಡಾಡಿ

ಎಲ್ಲ ಸಂಸದರ ಸಹಿ ಸಂಗ್ರಹಿಸಿ ಪ್ರಧಾನಿಗೆ ನೀಡಲು ನಿರ್ಧಾರ: ಕಡಾಡಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 9:44 IST
Last Updated 24 ಅಕ್ಟೋಬರ್ 2022, 9:44 IST
ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ವೀರಜ್ಯೋತಿ ಸ್ವಾಗಿಸಿದರು. ಇದೇ ವೇಳೆ ಅವರು ಮೆರವಣಿಗೆಗೂ ಚಾಲನೆ ನೀಡಿದರು, ಕಿತ್ತೂರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ದೊಡ್ಡಗೌಡರ ಅವರೂ ಇದ್ದಾರೆ
ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ವೀರಜ್ಯೋತಿ ಸ್ವಾಗಿಸಿದರು. ಇದೇ ವೇಳೆ ಅವರು ಮೆರವಣಿಗೆಗೂ ಚಾಲನೆ ನೀಡಿದರು, ಕಿತ್ತೂರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ದೊಡ್ಡಗೌಡರ ಅವರೂ ಇದ್ದಾರೆ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಐತಿಹಾಸಿಕ ಕಿತ್ತೂರು ಉತ್ಸವಕ್ಕೆ 25 ವರ್ಷಗಳ ನಂತರ ರಾಜ್ಯಮಟ್ಟದ ವ್ಯಾಪ್ತಿ ನೀಡಲಾಗಿದೆ. ನಾವು ಇಷ್ಟಕ್ಕೇ ತೃಪ್ತರಾಗುವುದಿಲ್ಲ. ಮುಂದಿನ ವರ್ಷದಿಂದ ರಾಷ್ಟ್ರಮಟ್ಟದ ಹಬ್ಬವಾಗಿ ಆಚರಿಸುವಂತೆ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ಪುತ್ಥಳಿ ಆವರಣದಲ್ಲಿ ಸೋಮವಾರಜಾನಪದ ಕಲಾಮೇಳದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವೀರ ಸೇನಾನಿಗಳ ಸಾಹಸ ಹಾಗೂ ದೇಶಕ್ಕಾಗಿ ಪ್ರಾಣ ನೀಡಿದ ಇತಿಹಾಸ ರಾಷ್ಟ್ರಮಟ್ಟದಲ್ಲಿ ಪ್ರಚಾರವಾಗಬೇಕಿದೆ. ಈ ಬಗ್ಗೆ ರಾಜ್ಯದ ಎಲ್ಲ ಸಂಸದರು ಸಹಿ ಮಾಡಿ ಪ್ರಧಾನಿ ಅವರಿಗೆ ನೀಡುತ್ತೇವೆ’ ಎಂದರು.

‘ದೇಶದಲ್ಲಿರುವ ವಿವಿಧ ಸೇನಾ ರೆಜಿಮೆಂಟ್‌ಗಳಿಗೆ ಕಿತ್ತೂರು ಕಲಿಗಳ ಹೆಸರು ಇಡಬೇಕು. ಝಾನ್ಸಿರಾಣಿಗಿಂತಲೂ ಮುಂಚೆ ಬ್ರಿಟಿಷ್‌ ಪ್ರಭುತ್ವ ಧಿಕ್ಕಿರಿಸಿ ಯುದ್ಧ ಮಾಡಿದ್ದು ರಾಣಿ ಚನ್ನಮ್ಮ. ಅವರ ಶೌರ್ಯ, ಪರಾಕ್ರಮ, ತ್ಯಾಗಗುಣಗಳು ದೇಶದ ಸೈನಿಕರಿಗೆ ಮಾದರಿ. ಹಾಗಾಗಿ, ರೆಜಿಮೆಂಟ್‌ಗಳಿಗೆ ನಾಮಕರಣ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದೂ ಹೇಳಿದರು.

ADVERTISEMENT

ಶಾಸಕ ಮಹಾಂತೇಶ ದೊಡ್ಡಗೌಡರ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ. ದರ್ಶನ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.