ADVERTISEMENT

ಚನ್ನಮ್ಮನ ಕಿತ್ತೂರು: ಪ್ರವಾಸಿ ಕೇಂದ್ರವಾದ ಕೋಟೆ ಆವರಣ

ತಂಡೋಪತಂಡವಾಗಿ ಬಂದ ವಿದ್ಯಾರ್ಥಿಗಳು, ಚನ್ನಮ್ಮನ ಇತಿಹಾಸ ಅರಿತು ಸಂಭ್ರಮಿಸಿದ ಯುವಜನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:00 IST
Last Updated 24 ಅಕ್ಟೋಬರ್ 2024, 14:00 IST
ಕಿತ್ತೂರು ಕೋಟೆ ಆವರಣಕ್ಕೆ ಆಗಮಿಸಿದ್ದ ಬೈಲಹೊಂಗಲದ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ವಿಜಯಜ್ಯೋತಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು ಹೀಗೆ
ಪ್ರಜಾವಾಣಿ ಚಿತ್ರ
ಕಿತ್ತೂರು ಕೋಟೆ ಆವರಣಕ್ಕೆ ಆಗಮಿಸಿದ್ದ ಬೈಲಹೊಂಗಲದ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ವಿಜಯಜ್ಯೋತಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು ಹೀಗೆ ಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು: ಕಿತ್ತೂರು 200ನೇ ವಿಜಯೋತ್ಸವ ಪ್ರಯುಕ್ತ ಇಲ್ಲಿನ ಕೋಟೆ ಆವರಣವೀಗ ಶೈಕ್ಷಣಿಕ ಪ್ರವಾಸಿ ಕೇಂದ್ರದ ಸ್ವರೂಪ ಪಡೆದಿದೆ.

ಇತಿಹಾಸಪ್ರಿಯರು, ಸಂಶೋಧಕರು, ಕಲಾವಿದರು ಹಾಗೂ ಚನ್ನಮ್ಮನ ಅಭಿಮಾನಿಗಳಷ್ಟೇ ಅಲ್ಲ; ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುತ್ತಿರುವ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ಕೊಟ್ಟು, ಚನ್ನಮ್ಮನ ಸಾಹಸಗಾಥೆ ಅರಿಯುತ್ತಿದ್ದಾರೆ.

ಉತ್ಸವದ ಹಿನ್ನೆಲೆಯಲ್ಲಿ ಬೈಲಹೊಂಗಲ, ಕಿತ್ತೂರಿನ ಶಾಲೆಗಳಿಗೆ ರಜೆ ಘೋಷಣೆಯಾಗಲಿದೆ. ಅವರೆಡೂ ತಾಲ್ಲೂಕುಗಳಿಂದ ಹೆಚ್ಚಿನ ಮಕ್ಕಳು ಕೋಟೆ ಆವರಣದತ್ತ ಹೆಜ್ಜೆಹಾಕುತ್ತಿದ್ದಾರೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಗುರುವಾರ ಇಲ್ಲಿಗೆ ಬಂದಿರುವುದು ಕಂಡುಬಂತು.

ADVERTISEMENT

‘ಯುವಸಮೂಹಕ್ಕೆ ಚನ್ನಮ್ಮನೇ ಪ್ರೇರಣೆ. ಅವಳ ಇತಿಹಾಸ ಅರಿಯುವ ಜತೆಗೆ, ನಾಯಕತ್ವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಿತ್ತೂರು ಕೋಟೆಗೆ ಬಂದಿದ್ದೇವೆ. ಇಲ್ಲಿನ ಐತಿಹಾಸಿಕ ಪಳೆಯುಳಿಕೆಗಳನ್ನೆಲ್ಲ ವೀಕ್ಷಿಸುವ ಜತೆಗೆ, ಉತ್ಸವದ ಕಾರ್ಯಕ್ರಮಗಳಿಗೂ ಸಾಕ್ಷಿಯಾಗುತ್ತಿದ್ದೇವೆ’ ಎಂದು ಬೈಲಹೊಂಗಲದ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಾದ ಅರ್ಚಿತಾ ಶಿಂತ್ರೆ ಮತ್ತು ಚೈತ್ರಾ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

44 ಮಕ್ಕಳೊಂದಿಗೆ ಬಂದಿದ್ದೇವೆ: ‘ಮಕ್ಕಳು ಚನ್ನಮ್ಮನಂಥ ಸಾಹಸ, ನಾಯಕತ್ವ ಗುಣ ಬೆಳೆಸಿಕೊಳ್ಳಲಿ. ನಾಡಪ್ರೇಮ ಅವರಲ್ಲಿ ಜಾಗೃತವಾಗಲೆಂದು 44 ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದೇವೆ. ಮಕ್ಕಳೂ ಉತ್ಸಾಹದಿಂದ ಸ್ಮಾರಕಗಳನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ’ ಎನ್ನುತ್ತಾರೆ ಖಾನಾಪುರದ ಮರಾಠ ಮಂಡಳ ಪ್ರೌಢಶಾಲೆಯ ಶಿಕ್ಷಕರಾದ ಟಿ.ಆರ್‌.ಪತ್ರಿ, ಕೆ.ಎಂ.ಪಾಟೀಲ.

ಕೋಟೆಯಂಗಳದಲ್ಲಿ ಗುರುವಾರ ಬೆಳಗಿನ ಅವಧಿಯಲ್ಲಿ ಹೆಚ್ಚಿನ ಜನರು ಇರಲಿಲ್ಲ. ಆದರೆ, ಮಧ್ಯಾಹ್ನದ ನಂತರ ಜನಸಂದಣಿ ಹೆಚ್ಚುತ್ತ ಹೋಯಿತು. ಎತ್ತ ಕಣ್ಣು ಹಾಯಿಸಿದರೂ, ಯುವಜನರ ದಂಡೇ ಕಂಡುಬಂತು.

ಸೆಲ್ಫಿ ಸಂಭ್ರಮ: ಕಿತ್ತೂರು ಕೋಟೆ, ಪ್ರಾಚ್ಯವಸ್ತು ಸಂಗ್ರಹಾಲಯ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಬತ್ತೇರಿಗೆ ಭೇಟಿ ಕೊಡುತ್ತಿರುವ ಯುವಜನರು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ ಆಗಮಿಸಿದ ವಿಜಯಜ್ಯೋತಿ ವಾಹನವನ್ನು ಕೋಟೆ ಆವರಣದಲ್ಲೇ ನಿಲ್ಲಿಸಲಾಗಿದೆ. ಅದರ ಮುಂದೆ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಬರವಿಲ್ಲ.

ಕೋಟೆ ಆವರಣದಲ್ಲಿ ವಿವಿಧ ವಸ್ತುಗಳ ಮಾರಾಟವೂ ಜೋರಾಗಿತ್ತು. ಆಟಿಕೆಗಳು, ಆಲಂಕಾರಿಕ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು, ಸೀರೆಗಳು, ಖಾದಿ ಬಟ್ಟೆಗಳು, ಕೃಷಿ ಉಪಕರಣಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ವಿವಿಧ ಆಹಾರ ಖಾದ್ಯಗಳು, ತಂಪುಪಾನೀಯಗಳನ್ನು ಸೇವಿಸಿದರು.

ಗೋಷ್ಠಿಗೂ ಕಿವಿಯಾದ ಮಕ್ಕಳು

ಮುಖ್ಯ ವೇದಿಕೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ರಾಜ್ಯಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲೂ ಶಾಲೆ– ಕಾಲೇಜು ವಿದ್ಯಾರ್ಥಿಗಳೇ ಕಂಡುಬಂದರು. ಗೋಷ್ಠಿಗೆ ಪ್ರೇಕ್ಷಕರ ಕೊರತೆ ಕಾಡುವುದನ್ನು ತಪ್ಪಿಸಿದರು. ಮಕ್ಕಳಿಗಾಗಿ ಉಚಿತವಾಗಿ ಬಸ್‌ ವ್ಯವಸ್ಥೆ ಮಾಡಿದ್ದರಿಂದ ಬೆಳಗಾವಿ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿನಿಯರ ದಂಡೇ ಹರಿದುಬಂತು. ವಿಶಾಲವಾದ ಮುಖ್ಯ ಶಾಮಿಯಾನದಲ್ಲಿ ತುಂಬಿದ ಮಕ್ಕಳು ಗೋಷ್ಠಿಯ ಗೌರವ ಕಾಪಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.