ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಕಿತ್ತೂರು ರಾಣಿ ಚನ್ನಮ್ಮ ಮತ್ತು ಅವರ ಜತೆಗಿದ್ದ ಯೋಧರು ಸ್ವಾರ್ಥಕ್ಕಾಗಿ ಹೋರಾಡಿದವರಲ್ಲ. ಈ ನಾಡನ್ನು ಅವರು ಉತ್ಕಟವಾಗಿ ಪ್ರೀತಿಸಿದ್ದರು. ನಾವು ಕೂಡ ಸ್ವಾರ್ಥದಿಂದ ಹೊರಗೆ ನಿಂತು ದೇಶವನ್ನು, ದೇಶದ ಜನರನ್ನು ಪ್ರೀತಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ನಡೆದ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ದೇಶದ ಪ್ರಜೆಗಳನ್ನು ಇದೇ ದೇಶದ ದೊರೆಗಳು ಆಳಬೇಕು ಎಂಬ ಕಾರಣಕ್ಕೆ ಚನ್ನಮ್ಮ ಯುದ್ಧ ಮಾಡಿದರು. ಅವರ ನಿಸ್ವಾರ್ಥ ದೇಶಪ್ರೇಮವನ್ನು ‘ಇಂದಿನವರು’ ಕಲಿಯಬೇಕು’ ಎಂದರು.
‘ಮೊದಲ ಬಾರಿಗೆ ನಾನೇ ಚನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಶುರು ಮಾಡಿದೆ. ಯಾವುದೇ ಸಮಾಜವನ್ನು ವೈಭವೀಕರಿಸಲು ಈ ನಿರ್ಧಾರ ಮಾಡಲಿಲ್ಲ. ಈ ನೆಲದ ಇತಿಹಾಸ ಪೀಳಿಗೆಯಿಂದ ಪೀಳಿಗೆಗೆ ದಾಟಬೇಕೆಂಬ ಕಾರಣಕ್ಕೆ ಮಾಡಿದ್ದೇನೆ’ ಎಂದರು.
‘ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮಾನತೆ ಸಾರಿದರು. ಇಂದಿಗೂ ಅದು ಸಾಧ್ಯವಾಗಿಲ್ಲ. ಆದರೆ, ಕಿತ್ತೂರು ಚರಿತ್ರೆ ತೆರೆದು ನೋಡಿ; ಎಲ್ಲ ಸಮಾಜದವರೂ ಚನ್ನಮ್ಮನ ಜತೆಗೆ ನಿಂತ ಉದಾಹರಣೆ ಸಿಗುತ್ತವೆ. ನಮಗೆ ಇಂಥವರು ಮಾದರಿಯಾಗಬೇಕು. ಸಮಾಜಗಳ ಮಧ್ಯೆ ದ್ವೇಷ ಬೆಳೆಸುವವರನ್ನು ವಿರೋಧಿಸಲೇಬೇಕು. ನಮಗೆ ಸಿಕ್ಕ ಅಧಿಕಾರ ಬಳಸಿಕೊಂಡೇ ಸಮಾನತೆ ತರಬೇಕು’ ಎಂದೂ ಅವರು ಕರೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಸ್ವಾತಂತ್ರ್ಯ ಯೋಧರಿಗೆ ಅನ್ನ– ನೀರು ನೀಡಿದವರೂ ಸ್ವಾತಂತ್ರ್ಯ ಹೋರಾಟಗಾರರೇ. ಆದರೆ, ಗಂಡಸರಿಗೆ ಹಿನ್ನೆಲೆಯಾಗಿ ನಿಂತ ಮಹಿಳೆಯರನ್ನು ನಾವು ಸ್ವಾತಂತ್ರ್ಯ ಹೋರಾಟಗಾರರು ಎಂದು ದಾಖಲಿಸಲು ಆಗಿಲ್ಲ. ಈ ವಿಷಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ವ್ಯಾಖ್ಯಾನ ಬದಲಾಗಬೇಕು’ ಎಂದು ಪ್ರತಿಪಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಕಿತ್ತೂರು ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.