ADVERTISEMENT

ಕಿತ್ತೂರು ಅಪಘಾತ | ‘ಒಬ್ಬಾಕಿ ಮಗಳಿದ್ದಿ, ಎದ್ದ ಹೋದೆಲ್ಲ ಮಗಳ..

ಮುಗಿಲು ಮುಟ್ಟಿದ ಕಾವೇರಿ ಕಾಜಗಾರ ಹೆತ್ತವರ ಆಕ್ರಂದನ; ₹2 ಲಕ್ಷ ಪರಿಹಾರ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:02 IST
Last Updated 31 ಜನವರಿ 2024, 16:02 IST
ಪುತ್ರಿಯ ಸಾವಿನಿಂದಾಗಿ ಚನ್ನಮ್ಮನ ಕಿತ್ತೂರು ಆಸ್ಪತ್ರೆಯ ಎದುರು ರೋದಿಸುತ್ತಿರುವ ತಾಯಿ ನೀಲವ್ವ ಮತ್ತು ಸದಸ್ಯರು
ಪುತ್ರಿಯ ಸಾವಿನಿಂದಾಗಿ ಚನ್ನಮ್ಮನ ಕಿತ್ತೂರು ಆಸ್ಪತ್ರೆಯ ಎದುರು ರೋದಿಸುತ್ತಿರುವ ತಾಯಿ ನೀಲವ್ವ ಮತ್ತು ಸದಸ್ಯರು   

ಚನ್ನಮ್ಮನ ಕಿತ್ತೂರು: ‘ಎದ್ದ ಹೋದೆಲ್ಲ ಮಗಳ..., ಒಬ್ಬಾಕಿ ಮಗಳಿದ್ದಿ, ನಿನ್ ಮದುವೆ ಮಾಡಬೇಕಂತ ಮಾಡಿದ್ದೆ, ಅಯ್ಯೊ ಮಗಳೇ..’

ಇಲ್ಲಿನ ಕಿತ್ತೂರು– ಬೀಡಿ ರಸ್ತೆಯ ಫಾರೆಸ್ಟ್ ನಾಕಾ ಬಳಿ ಬುಧವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ಕಾವೇರಿ ಕಾಜಗಾರ ಅವರ ತಾಯಿಯ ಆಕ್ರಂದನ, ಸಮುದಾಯ ಆರೋಗ್ಯ ಕೇಂದ್ರದ ಎದುರು ನೆರೆದಿದ್ದವರ ಕಣ್ಣು ಹನಿಗೂಡುವಂತೆ ಮಾಡಿತು.

ತಾಲ್ಲೂಕಿನ ಉಗರಖೋಡ ಗ್ರಾಮದ ನೀಲವ್ವ, ಬಸಪ್ಪ ಕಾಜಗಾರ ದಂಪತಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಸೇರಿ ಇಬ್ಬರು ಮಕ್ಕಳು. ಮೂಲ ಕಸುಬು ಕೃಷಿ. ಪುತ್ರಿ ಕಾವೇರಿ, ಊರಿನಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ADVERTISEMENT

ಕಿತ್ತೂರು ಮುಖ್ಯ ಬಸ್ ನಿಲ್ದಾಣದಿಂದ ಬೀಡಿ ರಸ್ತೆಯಲ್ಲಿ ಬರುವ ಸರ್ಕಾರಿ ಕಾಲೇಜಿಗೆ ಹೆಚ್ಚುವರಿ ಬಸ್ ಸೌಲಭ್ಯಗಳಿಲ್ಲ. ಬಸ್‌ಗೆ ಬರುವ ವಿದ್ಯಾರ್ಥಿಗಳು, ಉಪನ್ಯಾಸಕರು ನಿಲ್ದಾಣದಿಂದ ಅಥವಾ ಚನ್ನಮ್ಮ ವೃತ್ತದಿಂದ ನಡೆದುಕೊಂಡೇ ಬರಬೇಕು ಮತ್ತು ವಾಪಸಾಗಬೇಕು.

ಹೀಗೆ ಬುಧವಾರ ವಾಪಸು ಬರುವಾಗ ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಲಘು ವಾಹನ ಕಾವೇರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಜೀವ ಚೆಲ್ಲಿದ್ದಾಳೆ.

‘ಪದವಿ ಓದ ಬಯಸಿದ ವಿದ್ಯಾರ್ಥಿನಿ ಮತ್ತು ಕುಟುಂಬದವರ ಆಸೆ ಕೊನೆಗೂ ಕೈಗೂಡಲಿಲ್ಲ. ವಿಧಿ ತನ್ನ ಅಟ್ಟಹಾಸ ಮೆರೆಯಿತು’ ಎಂದು ಗ್ರಾಮಸ್ಥರು ನೊಂದು ನುಡಿದರು.

ಎಚ್ಚೆತ್ತುಗೊಳ್ಳದ ಆಡಳಿತ:

ಮಿತಿಮೀರಿದ ವೇಗ, ರಸ್ತೆ ಬದಿಗೆ ಸಮರ್ಪಕ ಎಚ್ಚರಿಕೆ ಫಲಕ ಹಾಕದಿರುವುದು ಮತ್ತು ಅಗತ್ಯವಿದ್ದೆಡೆ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಿಸದೆ ಇರುವುದು ಕಿತ್ತೂರು, ಬೀಡಿ ರಸ್ತೆಯಲ್ಲಿ ಅಪಘಾತ ಹೆಚ್ಚಾಗಲು ಕಾರಣ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆ ಸುಧಾರಣೆ ಆದ ನಂತರ 100ರಿಂದ 120 ಕಿ.ಮೀ ವೇಗದಲ್ಲಿ ಕಾರು ಸೇರಿದಂತೆ ಇತರ ವಾಹನಗಳು ಓಡಾಡುತ್ತವೆ. ಹಠಾತ್ತನೆ ಬರುವ ತಿರುವಿನಿಂದಾಗಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪುತ್ತವೆ. ಇದರಿಂದ ನಿಷ್ಪಾಪಿ ಜೀವಗಳು ಬಲಿಯಾಗುತ್ತಿವೆ’ ಎಂದು ಶಿವಾನಂದ ಗುಂಜಿ, ಮಂಜುನಾಥ ಹಾವನ್ನವರ ಹೇಳಿದರು.

‘ಇಲ್ಲಿಯ ಗ್ರಾಮೀಣ ಯುವಕರ ಸೇನಾ ತರಬೇತಿ ಪಡೆಯಲು ಬಂದಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಯುವಕ ಮೃತಪಟ್ಟಿದ್ದ. ಮೂವರು ಗಾಯಗೊಂಡಿದ್ದರು. ಸವುಳ ಮುಖಿ ಕ್ರಾಸ್‌ನಲ್ಲಂತೂ ಚಿಕ್ಕಪುಟ್ಟ ಅಪಘಾತಗಳು ವರದಿಯಾಗುತ್ತಲೇ ಇರುತ್ತವೆ’ ಎನ್ನುತ್ತಾರೆ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು.

₹10 ಲಕ್ಷ ಪರಿಹಾರಕ್ಕೆ ಆಗ್ರಹ

ವಿದ್ಯಾರ್ಥಿನಿ ಸಾವಿನಿಂದಾಗಿ ಆಕ್ರೋಶಗೊಂಡ ಸಹಪಾಠಿಗಳು, ‘ಕಾವೇರಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಅಪಘಾತ ತಪ್ಪಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಜತೆಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿ ₹2 ಲಕ್ಷ ಪರಿಹಾರವನ್ನು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ದೊರಕಿಸಿ ಕೊಡಲಾಗುವುದು. ಅಪಘಾತ ರಹಿತ ವಲಯ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕಾವೇರಿ ಕಾಜಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.