ಚನ್ನಮ್ಮನ ಕಿತ್ತೂರ (ರಾಣಿ ಚನ್ನಮ್ಮ ವೇದಿಕೆ): 198ನೇ ಕಿತ್ತೂರು ಉತ್ಸವ ಅಂಗವಾಗಿ ಇಲ್ಲಿನ ಮುಖ್ಯವೇದಿಕೆಯಲ್ಲಿ ಸೋಮವಾರ ರಾತ್ರಿ ನೂಪುರ ಲೋಕವೇ ಅನಾವರಣಗೊಂಡಿತು. ವಿಶಾಲವಾದ ವೇದಿಕೆ ಮೇಲೆ ವರ್ಣರಂಜಿತ ವಿದ್ಯುದ್ದೀಪಾಲಂಕಾರ ಕಣ್ಮನ ಸೂರೆಗೊಂಡಿತು.
ನಾಡಿನ ಮೂಲೆಮೂಲೆಯಿಂದ ಬಂದಿದ್ದ ಜನಪದ, ಶಾಸ್ತ್ರೀಯ ಕಲಾವಿದರ ದಂಡು ಇನ್ನಿಲ್ಲದಂತೆ ಮನರಂಜನೆ ನೀಡಿತು. ತಡರಾತ್ರಿಯಾದರೂ ಅಪಾರ ಸಂಖ್ಯೆಯ ಜನ ಕಿಕ್ಕಿರಿದು ಸೇರಿದ್ದರು. ಸಿಳ್ಳೆ, ಚಪ್ಪಾಳೆಗಳ ಮೂಲಕ ಕಲಾವಿದರನ್ನು ಹುರುದುಂಬಿಸಿದರು. ಒಂದರ ಹಿಂದೆ ಒಂದು ತಂಡ ವೇದಿಕೆಗೆ ದಾಳಿ ಇಟ್ಟು ಜನರನ್ನು ಅಯಸ್ಕಾಂತದಂತೆ ಸೆಳೆಯಿತು.
ತರುಣಿಯರ ಲಂಬಾಣಿ ನೃತ್ಯ, ಯುವಕರ ಕೋಲು ಕುಣಿತ, ಶಹನಾಯ್ ವಾದನ, ಮಹಿಳೆಯರ ವೀರಭಾರತಿ ನೃತ್ಯ, ಮಲ್ಲಕಂಬ... ಒಂದಕ್ಕಿಂತ ಒಂದು ಸೊಗಸಾಗಿದ್ದವು.
ಹಾಸ್ಯ ಕಲಾಮೇಳ: ಕಿರುತೆರೆ ಕಲಾವಿದರಾದ ಮಜಾಭಾರತ, ಕಾಮಿಡಿ ಕಿಲಾಡಿಗಳು ತಂಡದ ಕಲಾವಿದರು ನಗೆಹಬ್ಬ ನೀಡಿದರು. ಇಷ್ಟು ದಿನ ಟಿವಿಯ ಪರದೆಯಲ್ಲಿ ನೋಡಿದ ಕಲಾವಿದರನ್ನು ಕಣ್ಣಿನ ಮುಂದೆ ಕಂಡು ಯುವ ಹೃದಯಗಳು ಖುಷಿಯಿಂದ ಬೀಗಿದವು.
ಹಾಸ್ಯ ಮಾತುಗಾರರಾದ ನರಸಿಂಹ ಜೋಶಿ, ಬಸವರಾಜ ಮಹಾಮನಿ ಅವರ ಜೋಡಿ ನಗೆ ಚಟಾಕಿ ಎಲ್ಲರ ಮೊಗದಲ್ಲಿ ನಗು ಮೂಡಿಸಿತು. ಬಸಯ್ಯ ಗುತ್ತೇದಾರ ಸಂಗೀತ, ರವಿರಾಜ ಎಸ್. ವಚನ ಗಾಯನ, ಬಸವರಾಜ ಬಂಟನೂರ ಸುಗಮ ಸಂಗೀತ, ತಿಪ್ಪೇಶ ಮತ್ತು ಲೆಕೀಕೊನಿ ಹಾಗೂ ತಂಡದವರಿಂದ ಮೊಳಗಿದ ಸಂಗೀತ, ಸಿದ್ದೇಶ್ವರ ಶಾಸ್ತ್ರಿಗಳ ಕಥಾ ಕಿರ್ತನ, ಸೌಮ್ಯ ಪತ್ತಾರ ವಚನ ಸಂಗೀತ ಕೇಳುಗರ ಮನ ಸೆಳೆದರೆ, ಭಾಗ್ಯ ವಿಭೂತಿ ಕೊಳಲು ವಾದನ, ರೋಹಿಣಿ ಗಂಗಾಧರಯ್ಯ ಶಾಸ್ತ್ರೀಯ ಸಂಗೀತ, ಉಷಾ ಕಾರಂತ ಜನಪದ ಸಂಗೀತ, ಪಂಡಿತ ಬಿ.ಸಿ.ದೇಗಾವಿಮಠ ಅಂಧ ಹಾಗೂ ಆಕಾಶವಾಣಿ ಕಲಾವಿದರ ಸಂಗೀತ ವೈವಿಧ್ಯ, ಭೂಮಿ ಮತ್ತು ತಂಡದ ವೀರಗಾಸೆ, ಕಲಾಸುಜಯ ಶಾಸ್ತ್ರೀಯ ನೃತ್ಯ ಪ್ರೇಕ್ಷಕರ ಮನಗೆದ್ದವು.
*
ಪುಳಕ ಹುಟ್ಟಿಸಿದ ಪುನೀತ್
ಕನ್ನಡಿಗರ ನೆಚ್ಚಿನ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನೇ ಹೋಲುವಂಥ ವ್ಯಕ್ತಿ ವೇದಿಕೆ ಬರುತ್ತಿದ್ದಂತೆಯೇ ಯುವಜನರಿಂದ ಹೋಯ್... ಎಂಬ ಕೂಗು ಕೇಳಿಬಂತು.
ಜ್ಯೂನಿಯರ್ ಪುನೀತ್ ರಾಜ್‌ಕುಮಾರ ಎಂದೇ ಹೆಸರಾದ ನಾಗರಾಜ ಬಸ್ತಿ ಅವರ ಅಂಗಸೌಷ್ಠವ, ಆಂಗಿಕ ಭಾಷೆ, ಧ್ವನಿ ಎಲ್ಲವೂ ಥೇಟ್ ಪುನೀತ್ ಅವರನ್ನೇ ಹೋಲುತ್ತದೆ. ಅವರು ವೇದಿಕೆಯಿಂದ ಇಳಿಯುತ್ತಿದ್ದಂತೆಯೇ ಸೆಲ್ಫಿ, ಫೋಟೊಗಾಗಿ ಮುಗಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.