ADVERTISEMENT

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ: ಇಳಿಸಂಜೆ ತಂಗಾಳಿಯಲ್ಲಿ ಸಂಗೀತ ರಸದೌತಣ

ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ಕುನಾಲ್‌ ಮುನ್ನುಡಿ; ಸಂಗೀತ ಮೋಡಿಯಲ್ಲಿ ತೇಲಿದ ಯುವಜನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 18:36 IST
Last Updated 22 ಅಕ್ಟೋಬರ್ 2024, 18:36 IST
   

ಬೆಳಗಾವಿ: ಇಳಿಸಂಜೆಯ ತಂಗಾಳಿಗೆ ಅರಳಿದ ಮೈ– ಮನ, ಕಿಕ್ಕಿರಿದು ಸೇರಿದ್ದ ಯುವ ಸಮೂಹದಿಂದ ಹರ್ಷದ ಹೊನಲು, ಸಿಳ್ಳೆ, ಚಪ್ಪಾಳೆ, ಕೇಕೆಗಳ ಭೋರ್ಗರೆತ. ನಿರಂತರವಾಗಿ ಒಂದರ ಹಿಂದೊಂದು ತೇಲಿಬಂದ ಚಿತ್ರಗೀತೆಗಳಿಗೆ ಉಲ್ಲಾಸದ ಜಲಪಾತ...

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಸಂಗೀತ ಸಂಜೆಯ ನೋಟವಿದು.

ಬಾಲುವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಕುನಾಲ್‌ ಗಾಂಜಾವಾಲಾ ಈ ಬಾರಿ ಉತ್ಸವ ರಂಗೇರುವಂತೆ ಮಾಡಿದರು. ವರ್ಣರಂಜಿತ ವೇದಿಕೆ ಮೇಲೆ, ಎದೆ ನಡುಗಿಸುವಂಥ ವಾದ್ಯಮೇಳಕ್ಕೆ ಯುವಜನ ಕುಣಿದು ಕುಪ್ಪಳಿಸಿದರು

ADVERTISEMENT

‘ನೀನೇ ನೀನೇ ಮನಸೆಲ್ಲಾ ನೀನೆ...’ ಎನ್ನುತ್ತ ಕುನಾಲ್‌ ವೇದಿಕೆಗೆ ಬರುತ್ತಿದ್ದಂತೆಯೇ ಎಲ್ಲಿಲ್ಲದ ಹರ್ಷ. ಯುವ ಸಮೂಹ ಸಿಳ್ಳೆ– ಕೇಕೆಗಳ ಮೂಲಕ ಸ್ವಾಗತ ಕೋರಿತು. ಮೊದಲಿಗೇ ಕನ್ನಡ ಚಿತ್ರಗೀತೆಯ ಜತೆಗೆ ಕಾರ್ಯಕ್ರಮ ಆರಂಭಿಸಿದ ಗಾಯಕ ಪ್ರೇಕ್ಷಕರನ್ನು ಸಂಭ್ರಮದಲ್ಲಿ ತೇಲಿಸಿದರು. ‘ಆಕಾಶ್‌’ ಚಿತ್ರಗೀತೆಯ ಮೂಲಕ ನಟ ಪುನೀತ್‌ ಅವರನ್ನು ನೆನಪಿಸಿದರು.

‘ಮಿಲನ’ ಚಿತ್ರದ ‘ಸಿಹಿ ಮಾತೊಂದು ಹೇಳಲೆ ನಾನಿಂದು...’ ಗಾಯನದ ಮೂಲಕ ಮತ್ತೆ ವೇದಿಕೆಯನ್ನು ಹುರುದುಂಬಿಸಿದರು. ಮಧ್ಯಮಧ್ಯದಲ್ಲಿ ಹಿಂದಿ ಚಿತ್ರಗೀತೆ ಹಾಡಿ ಯುವ ಮನಸ್ಸುಗಳನ್ನು ಬಾಲಿವುಡ್‌ನತ್ತ ಎಳೆದೊಯ್ದರು.

ಸಂಜೆ 4ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಾಕಷ್ಟು ತಡವಾಯಿತು. ಆದರೂ ಯುವಜನ ಗಂಟೆಗಟ್ಟಲೇ ಕಾದು ಕುಳಿತರು. ಬಿಡುವು ನೀಡಿದ ಮಳೆಯಿಂದ ಮತ್ತಷ್ಟು ಹುಮ್ಮಸ್ಸು ಮೂಡಿಬಂತು. ಪ್ರೇಕ್ಷಕರ ಗ್ಯಾಲರಿಯಿಂದ ಕುನಾಲ್‌ ಕುನಾಲ್‌, ಸಾಧು ಕೋಕಿಲ... ಎಂಬ ಹೆಸರು ಪದೇಪದೇ ಕೇಳಿ ಬಂತು.

ಜಿಲ್ಲೆಯ ಜನಪದ ಗಾಯಕರು ಆರಂಭಕ್ಕೆ ಜನಪದ ಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ನಂತರ ಬಂದ ಭರತನಾಟ್ಯ ಕಲಾವಿದೆಯರು ವೇದಿಕೆಯನ್ನು ನೂಪುರ ಲೋಕಕ್ಕೆ ಕರೆದೊಯ್ದರು.

ಇದಕ್ಕೂ ಮುನ್ನ ‘ಆಕ್ಸಿಜನ್‌’ ನೃತ್ಯ ತಂಡ ಪ್ರದರ್ಶಿಸಿ ಜೈ ಹೋ... ಗೀತೆ ಪ್ರೇಕ್ಷಕರನ್ನು ದೇಶಭಕ್ತಿಗೆ ಎಳೆಯಿತು. ಭರತನಾಟ್ಯ, ಕೂಚುಪುಡಿ, ಯಕ್ಷಗಾನ, ಭಾಂಗಡಿ, ಗುಜರಾತಿ ಹಾಗೂ ಬಂಗಾಳಿ ಶೈಲಿಯ ನೃತ್ಯದ ಮಿಶ್ರಣ ಮನೋಜ್ಞವಾಗಿ ಮೂಡಿಬಂತು.

ಬಳಿಕ ವೇದಿಕೆ ಆಕ್ರಮಿಸಿಕೊಂಡ ಸ್ವರೂಪ್‌ ಶೆಟ್ಟಿ ಅವರು ‘ಕಾಂತಾರ’ ಚಲನಚಿತ್ರದ ‘ವರಾಹ ರೂಪಂ...’ ಗೀತೆಯ ಜತೆಗೆ ಬೆಂಕಿ ಸಲಕರಣೆಗಳ ಚಳಕ ಪ್ರದರ್ಶಿಸಿದರು. ಗೀತ– ಸಂಗೀತ– ನೃತ್ಯದ ಜತೆಗೇ ಬೆಂಕಿಯ ಸಾಹನ ಪ್ರದರ್ಶನ ವಿಶಿಷ್ಟವಾಗಿ ಮೂಡಿಬಂತು.

ಬಳಿಕ ಬಂದ ಯುವ ಗಾಯಕಿ ಅನನ್ಯ, ‘ಸೋಜುಗದ ಸೂಜಿ ಮಲ್ಲಿಗೆ...’ ಹಾಡಿನ ಮೂಲಕ ಕಾರ್ಯಕ್ರಮವನ್ನು ತುಸು ಸಮಯ ಭಕ್ತಿಯ ಮಾರ್ಗಕ್ಕೆ ಕೊಂಡೊಯ್ದರು.

ಇಡೀ ವೇದಿಕೆಗೆ ಚುಂಬಕ ಸ್ಪರ್ಶ ನೀಡಿದ್ದ ಕುನಾಲ್‌. ಅವರ ಮಧುರ ಕಂಠದಿಂದ ಬಂದ ‘ಮೌಲಾ ಮೌಲಾ ರೇ...’, ‘ಬಸ್‌ ದಿಲ್‌ ಸೆ ದಿಲ್‌ ಕಾ ರಿಶ್ತಾ ಜೋಡ್‌ ದೂ...’ ಗೀತೆಗಳು ಹಿರಿಯರನ್ನೂ ಮೋಡಿ ಮಾಡಿದವು.

‘ತಾಜ್‌ಮಹಲ್‌’ ಚಿತ್ರದ ‘ಖುಷಿಯಾಗಿದೆ ಏಕೋ ನಿನ್ನಿಂದಲೇ...’ ಹಾಡು ತೇಲಿಬರುತ್ತಿದ್ದಂತೆಯೇ ಖುಷಿ ಮತ್ತಷ್ಟು ಇಮ್ಮಡಿಸಿತು. ಪ್ರೇಕ್ಷಕರ ಗ್ಯಾಲರಿಯಿಂದ ನೃತ್ಯ ಸಂಭ್ರಮ ನಿರಂತರ ಮುಂದುವರಿಯಿತು.

ಕುನಾಲ್‌ ಅವರೇ ಹಾಡಿದ ‘ಭಿಗೇ ಹೋಂಟ್‌ ತೇರೆ...’ ಗೀತೆಗಾಗಿ ಯುವಕರು ಪದೇಪದೇ ಒತ್ತಾಸೆ ವ್ಯಕ್ತಪಡಿಸಿದರು.

‘ಮುಂಗಾರು ಮಳೆ’ ಚಿತ್ರದ ‘ಒಂದೇ ಒಂದು ಸಾರಿ ಕಣ್ಮುಂದೆ ಬಾರೆ...’ ಚಿತ್ರಗೀತೆ ಬಂದಾಗಲಂತೂ ಜನ ಮೈಮರೆತು ಕುಣಿದರು. ಹಾಡು ಮುಗಿಯುವವರೆಗೂ ಯಾರೊಬ್ಬರೂ ಕುರ್ಚಿ ಮೇಲೆ ಕುಳಿತುಕೊಳ್ಳದಂತೆ ಸಂಭ್ರಮಿಸಿದರು. ಮೈಕನ್ನು ಜನರತ್ತ ತೋರಿಸಿದ ಕುನಾಲ್‌ ಜನರಿಂದಲೂ ಹಾಡಿನ ಸಾಲುಗಳನ್ನು ಹೇಳಿಸಿದರು.

ರಾತ್ರಿಗೆ ಸಂಗೀತ ರಸದ ಲೇಪನ ಮಾಡಿದ್ದು ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ತಂಡ. ಒಂದಾದ ನಂತರ ಒಂದು ಪ್ರಸಿದ್ಧ ಗೀತೆಗಳನ್ನು ಹಾಡಿದ ತಂಡ ಉತ್ಸವಕ್ಕೆ ಹೊಸ ಚೈತನ್ಯ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.