ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಪ್ರಯುಕ್ತ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಸಾದರಪಡಿಸಿತು. ರಾಜಬೀದಿಯಲ್ಲಿ ಜನಸಾಗರವಿದ್ದರೆ, ಸಂಭ್ರಮವು ಎಲ್ಲೆಡೆ ಆವರಿಸಿತ್ತು. ಎಲ್ಲರೂ ಜೊತೆಗೂಡಿ ಚೆಂದದ ಲೋಕವನ್ನೇ ಸೃಷ್ಟಿಸಿದ್ದರು.
ರಾಜ್ಯದಾದ್ಯಂತ ಸಂಚರಿಸಿ ಬಂದ ‘ವಿಜಯ ಜ್ಯೋತಿ’ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಗೆ ಚಾಲನೆ ನೀಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೂರಡಿ ವಿಸ್ತಾರದ ರಾಜಬೀದಿಯಲ್ಲಿ ಜನ ನದಿಯಂತೆ ಹರಿದು ಬಂದರು.
ವೇಷಭೂಷಣ, ಸಿಳ್ಳೆ ಚಪ್ಪಾಳೆ ಕೇಕೆಗಳ ಮಧ್ಯೆ ಹೆಜ್ಜೆ ಹಾಕಿದ ಕಲಾತಂಡಗಳು, ದೇಸಿವಾದ್ಯಗಳ ಸದ್ದು, ಗೆಜ್ಜೆನಾದ, ಹಲಗೆಮೇಳ, ಡೊಳ್ಳು– ಢಮರುಗ, ಜಾಂಝ್‌ಪಥಕ್, ಕೀಲುಕುದುರೆ, ಕೋಳಿನೃತ್ಯ, ಗೊರವರ ಕುಣಿತ, ದೊಡ್ಡಸಂಬಾಳ ಮೇಳ, ನಗಾರಿ, ನಂದಿಧ್ವಜ, ಜಗ್ಗಲಿಗೆ ಮೇಳ, ಯಕ್ಷಗಾನ, ವೀರಗಾಸೆ ಕಲಾವಿದರು ಪಾಲ್ಗೊಂಡಿದ್ದರು.
ಕಿತ್ತೂರು ರಾಜಬೀದಿಯಲ್ಲಿ ವಿಜಯಜ್ಯೋತಿ ಬರುತ್ತಿದ್ದಂತೆಯೇ ಜನರು ರಸ್ತೆಗೆ ನೀರು ಹಾಕಿದರು. ಜ್ಯೋತಿಗೆ ಎಣ್ಣೆಹಾಕಿ, ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು, ನೈವೇದ್ಯ ಮಾಡಿದರು. ರಾಣಿ ಚನ್ನಮ್ಮನ ಮೂರ್ತಿಗೆ ಹೂ ಅರ್ಪಿಸಿ ನಮಸ್ಕರಿಸಿದರು. ವಿಜಯಜ್ಯೋತಿ ಮುಂದೆ 501 ಪೂರ್ಣಕುಂಭ ಕಳಶ ಹೊತ್ತ ವನಿತೆಯರು ಬರಿಗಾಲಲ್ಲಿ ಸಾಗಿದರು.
1824ರ ಅಕ್ಟೋಬರ್ 23ರಂದು ಕಿತ್ತೂರು ಸೇನೆ ಬ್ರಿಟಿಷ್ ಸೈನ್ಯದ ವಿರುದ್ಧ ವಿಜಯ ಸಾಧಿಸಿತು. ಆ ವಿಜಯಕ್ಕೆ 200 ವಸಂತಗಳು ತುಂಬಿವೆ. ಈ ಹಿಂದೆಂದಿಗಿಂತಲೂ ದ್ವಿಶತಮಾನೋತ್ಸವ ವೈಭವೋಪೇತವಾಗಿ ನಡೆಯಿತು.
ಸಂಸತ್ ಆವರಣದಲ್ಲಿ ಚನ್ನಮ್ಮ ಸ್ಮರಣೆ
ನವದೆಹಲಿ: ವೀರ ವನಿತೆ ಕಿತ್ತೂರು ಚನ್ನಮ್ಮ ಜನ್ಮದಿನಾಚರಣೆ ಹಾಗೂ ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷಗಳು ಸಂದ ಸಂದರ್ಭದಲ್ಲಿ ಸಂಸತ್ ಆವರಣದಲ್ಲಿ ಚನ್ನಮ್ಮ ಅವರ ಸಾಧನೆಯನ್ನು ಸ್ಮರಿಸಲಾಯಿತು.
ಚನ್ನಮ್ಮ ಪ್ರತಿಮೆಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೂಡಲ ಸಂಗಮ
ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಪುಷ್ಪನಮನ ಸಲ್ಲಿಸಿದರು.
ವಿ.ಸೋಮಣ್ಣ ಮಾತನಾಡಿ, ‘ಬ್ರಿಟಿಷರ ವಿರುದ್ಧ ಬಂಡಾಯ ಸಾರಿದ ಮೊದಲ ಧೀರ ಮಹಿಳೆ ಚನ್ನಮ್ಮ. ಬ್ರಿಟಿಷರ ವಿರುದ್ಧ ಹೋರಾಟದ ಮೂಲಕ ಸಂಚಲನ ಮೂಡಿಸಿ, ಸ್ವಾತಂತ್ರ‍್ಯ ಹೋರಾಟಕ್ಕೆ ಪ್ರೇರಣೆ ನೀಡಿದವರು’ ಎಂದರು. ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸಂಸತ್ ಆವರಣದಲ್ಲಿ ಪ್ರತಿವರ್ಷ ಕಾರ್ಯಕ್ರಮ ನಡೆಸಬೇಕು. ಈ ಮೂಲಕ ಉತ್ತರ ಭಾರತದ ಜನರಿಗೆ ಚನ್ನಮ್ಮನ ಶೌರ್ಯ ಸಾಹಸ ತಿಳಿಯುವಂತೆ ಆಗಬೇಕು’ ಎಂದರು.
ವಿಜಯೋತ್ಸವಕ್ಕೆ ಅದ್ದೂರಿ ಚಾಲನೆ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ವಿಜಯೋತ್ಸವದ 200ನೇ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಕಿತ್ತೂರು ಕೋಟೆ ಆವರಣದಲ್ಲಿನ ವರ್ಣರಂಜಿತ ವೇದಿಕೆ ಮೇಲೆ ಮೂರು ದಿನ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಿಗೂ ಅವರು ಚಾಲನೆ ನೀಡಿದರು.
ಕೇಂದ್ರ ಸರ್ಕಾರ ಹೊರತಂದ 200ನೇ ವಿಜಯೋತ್ಸವದ ಅಂಚೆಚೀಟಿ ಹಾಗೂ ಶಾಶ್ವತ ಲಕೋಟೆ ಪ್ರತಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆ ಮಾಡಿದರು. ಸಂತೋಷ ಹಾನಗಲ್ ಸಂಪಾದಕತ್ವದ ‘ದಿ ಫೋರ್ಟ್‌ರೆಸ್ ಆಫ್ ಫಿಯರ್‌ಲೆಸ್ ಡ್ರೀಮ್ಸ್’ ಹಾಗೂ ಯ.ರು.ಪಾಟೀಲ ಅವರ ‘ಸ್ವಾತಂತ್ರ್ಯ ಶ್ರೀ’ ಕೃತಿಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬಿಡುಗಡೆ ಮಾಡಿದರು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಿಚ್ಚಣಿಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಮಹಾಂತೇಶ ಕೌಜಲಗಿ, ಆಸಿಫ್ ಸೇಠ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.