ರಾಣಿ ಚನ್ನಮ್ಮ ವೇದಿಕೆ, ಚನ್ನಮ್ಮನ ಕಿತ್ತೂರು: ‘ಕಿತ್ತೂರು ಸಂಸ್ಥಾನದ ಇತಿಹಾಸದ ಈ ಭಾಗದ ಊರು ಹಾಗೂ ಮನೆಗಳಲ್ಲಿ ಹುದುಗಿಹೋಗಿದೆ. ಅದನ್ನು ಹೊರಗೆ ತೆಗೆಯುವ ಕೆಲಸವಾಗಬೇಕು. ಅದು ನಾಡಿನೆಲ್ಲೆಡೆ ಬೆಳಗುವಂತಾಗಬೇಕು’ ಎಂದು ಸಾಹಿತಿ ಶೇಖರ ಹಲಸಗಿ ಬಯಸಿದರು.
ಕಿತ್ತೂರು ಉತ್ಸವದ ಕೊನೆಯ ದಿನವಾದ ಶುಕ್ರವಾರ ನಡೆದ ಎರಡನೇ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.
‘ಕಿತ್ತೂರು ಸಂಸ್ಥಾನದ ಹಿರೇಮಲ್ಲಶೆಟ್ಟಿ ಹಾಗೂ ಚಿಕ್ಕಮಲ್ಲಶೆಟ್ಟಿ ವ್ಯಾಪಾರಕ್ಕಾಗಿ ಬಂದು ದೊರೆಗಳಾದವರು. ಅವರಲ್ಲಿ ಐದನೆಯ ದೊರೆಯಾಗಿದ್ದ ಅಲ್ಲಪ್ಪಗೌಡ ದೇಸಾಯಿ ಈ ಸಂಸ್ಥಾನದಲ್ಲಿ ಹೊಸಭಾಷ್ಯ ಬರೆದರು’ ಎಂದರು.
‘ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಗೆದ್ದ 200ನೇ ವಿಜಯೋತ್ಸವ ಇದಾಗಿದೆ. ಮುಂದೇನು ಮಾಡಬೇಕು ಎಂಬ ಸವಾಲು ನಮ್ಮ ಮುಂದಿದೆ. ವಿಚಾರ ಸಂಕಿರಣದಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಕ್ಕೆ ಬರಬೇಕು. ಸಂಶೋಧನಾತ್ಮಕ ವಿಷಯಗಳು ಹೊಸ ಬೆಳಕು ಚೆಲ್ಲಬೇಕು’ ಎಂದು ಅವರು ಬಯಸಿದರು.
‘ಮಲ್ಲಸರ್ಜ ಮತ್ತು ಸಮಕಾಲೀನ ರಾಜಕೀಯ ವ್ಯವಸ್ಥೆ’ ಕುರಿತು ಮಹೇಶ ಚನ್ನಂಗಿ ಮಾತನಾಡಿ, ‘ಕಿತ್ತೂರು ಸಂಸ್ಥಾನದ ಕೊನೆಯ ದೊರೆ ಶಿವಲಿಂಗರುದ್ರ ಸರ್ಜ ಅಕಾಲಿಕವಾಗಿ ನಿಧನರಾದ ನಂತರ ಪತ್ನಿ ವೀರಮ್ಮ ದತ್ತಕ ಪುತ್ರನನ್ನು ತೆಗೆದುಕೊಳ್ಳುತ್ತಾಳೆ. ಪತಿ ಸತ್ತಾಗ ವೀರಮ್ಮನ ವಯಸ್ಸು ಕೇವಲ 11 ಆಗಿತ್ತು. ಅಲ್ಪವಯಸ್ಸಿನಲ್ಲಿ ದತ್ತಕ ಮಾಡಿಕೊಳ್ಳುವುದನ್ನು ಮಾತ್ರ ಬ್ರಿಟಿಷರು ವಿರೋಧಿಸಿದ್ದರು’ ಎಂದು ತಿಳಿಸಿದರು.
‘ಆಂಗ್ಲರ ಒಂದನೇ ಮತ್ತು ಎರಡನೇ ಯುದ್ಧದ ಚಿತ್ರಣ’ ವಿಷಯ ಕುರಿತು ಶಿಕ್ಷಕ ಮಂಜುನಾಥ ಕಳಸಣ್ಣವರ ಮಾತನಾಡಿ, ‘ರಾಣಿ ಚನ್ನಮ್ಮನ ನಂತರ ಹೋರಾಟ ಮುಂದುವರೆಸಿದ್ದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಬಂಧಿಸುತ್ತಾರೆ. ರಾಯಣ್ಣನ ಸೇರಿ 13 ಜನರನ್ನು ಗಲ್ಲಿಗೇರಿಸುತ್ತಾರೆ. ಉಳಿದ 12 ಜನರು ಹಿನ್ನೆಲೆ ಏನಾಗಿತ್ತು. ಅವರೆಲ್ಲರ ಊರುಗಳು ಯಾವವು ಎಂಬುದರ ಬಗ್ಗೆ ಸಂಶೋಧನೆ ಆಗಬೇಕು’ ಎಂದರು.
ಪ್ರೊ.ಎಸ್.ಎಸ್. ಗದ್ದಿಗೌಡರ ಮಾತನಾಡಿ, ‘ಇಂದಿನ ಯುವ ಪೀಳಿಗೆ ಜಾನಪದ ಸಾಹಿತ್ಯ ಮೂಲಕವೂ ಇತಿಹಾಸ ಓದುವ ಕೆಲಸ ಮಾಡಬೇಕು. ಇದರಿಂದ ಜಾನಪದ ಸಾಹಿತ್ಯವೂ ಬೆಳೆಯುತ್ತದೆ, ಬೆಳೆಸಿದಂತೆಯೂ ಆಗುತ್ತದೆ’ ಎಂದರು.
ಪ್ರೊ.ಬಸವರಾಜ ಕುಪ್ಪಸಗೌಡ್ರ ಮಾತನಾಡಿ, ‘ರಾಣಿ ಚನ್ನಮ್ಮನಲ್ಲಿ ಮಾತೃ ವಾತ್ಸಲ್ಯವಿತ್ತು. ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದಾಳೆ’ ಎಂದರು. ಸುನಂದಾ ಎಮ್ಮಿ ಅಧ್ಯಕ್ಷತೆ ವಹಿಸಿದ್ದರು. ಬಿ. ಸಿ. ಬಿದರಿ ಸ್ವಾಗತಿಸಿದರು. ಮಹೇಶ ಹೆಗಡೆ ಮತ್ತು ವೀಣಾ ಹಿರೇಮಠ ನಿರೂಪಿಸಿದರು. ಜ್ಯೋತಿ ಕೋಟಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.