ಬೆಳಗಾವಿ: ‘ಚನ್ನಮ್ಮನ ಕಿತ್ತೂರು ಉತ್ಸವದ 200ನೇ ವರ್ಷಾಚರಣೆ ಅಕ್ಟೋಬರ್ 23 ರಿಂದ 25ರವರೆಗೆ ವೈಭವದಿಂದ ನಡೆಯಲಿದ್ದು, ರಾಜ್ಯ ಸರ್ಕಾರ ₹5 ಕೋಟಿ ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷ ₹3 ಕೋಟಿ ನೀಡಲಾಗುತಿತ್ತು. ಈ ಸಲ ದ್ವಿಶತಮಾನೋತ್ಸವ ವಿಶಿಷ್ಟವಾಗಿ ಆಚರಿಸಲು ₹2 ಕೋಟಿ ಹೆಚ್ಚು ನೀಡಲಾಗುವುದು. ರಾಷ್ಟ್ರಮಟ್ಟದ ಕ್ರೀಡಾ ಹಾಗೂ ಸಂಸ್ಕೃತಿಕ ಸ್ಪರ್ಧೆ, ಗ್ರಾಮೀಣ ಆಟ ನಡೆಯಲಿವೆ. 20 ಸಮಿತಿಗಳನ್ನು ರಚಿಸಲಾಗುವುದು’ ಎಂದರು.
‘ಕಿತ್ತೂರು ವಿಜಯೋತ್ಸವಕ್ಕೆ ಕಾರಣರಾದವರು, ಚನ್ನಮ್ಮನ ಸಹವರ್ತಿಗಳು, ರಾಯಣ್ಣನ ಜತೆಗೆ ಗಲ್ಲಿಗೇರಿದ ಇತರ 11 ವೀರರ ಬಗ್ಗೆಯೂ ಬೆಳಕು ಚೆಲ್ಲಬೇಕಿದೆ. ವೀರರ ವಂಶಸ್ಥರನ್ನು ಗುರುತಿಸಿ ಆಯಾ ಪ್ರಾಧಿಕಾರಗಳಲ್ಲಿ ಕಾಯಂ ಸದಸ್ಯರಾಗಿ ನೇಮಿಸಿಕೊಳ್ಳಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕೆಲಸ ಮಾಡಬೇಕು’ ಎಂದರು.
‘ಜಾನಪದ ವಿಶ್ವವಿದ್ಯಾಲಯದಿಂದ ಒಂದು ವಿಶಿಷ್ಟ ರಥ ಸಿದ್ಧಪಡಿಸಲಾಗುವುದು. ವಿಜಯಜ್ಯೋತಿ ಹೊತ್ತ ರಥವು ಅಕ್ಟೋಬರ್ 2ರಿಂದ ಬೆಂಗಳೂರಿನಿಂದ ಹೊರಟು ರಾಜ್ಯದ ಎಲ್ಲ ಜಿಲ್ಲೆಗೆ ತೆರಳಲಿದೆ’ ಎಂದರು.
‘ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರಿನಲ್ಲೂ ‘ಏರ್ ಶೋ’ ಏರ್ಪಡಿಸಲಾಗುವುದು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಅಂಚೆಚೀಟಿ, ಲಕೋಟೆ ಸಿದ್ಧಪಡಿಸುವುದು, ದೇಶದ ಬೇರೆಬೇರೆ ಭಾಗಗಳಿಂದ ಕುಸ್ತಿ ಪಟುಗಳು, ಕಬಡ್ಡಿ ಆಟಗಾರರು, ಒಲಿಂಪಿಕ್ ಪದಕ ವಿಜೇತರನ್ನು ಆಹ್ವಾನಿಸುವುದು ಸೇರಿ ವಿವಿಧ ಆಕರ್ಷಣೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.