ಬೆಳಗಾವಿ: ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ಗಾಯಕ ವಿಜಯಪ್ರಕಾಶ್ ಮತ್ತಷ್ಟು ಮೆರಗು ನೀಡಿದರು. ತಮ್ಮ ಕಂಚಿನ ಕಂಠದಿಂದ ಗಾಯನ ಹೊಳೆ ಹರಿಸಿದ ಈ ಗಾಯಕ, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆದರು. ಗುರುವಾರ ರಾತ್ರಿ ಆರಂಭವಾದ ರಸಸಂಜೆ ಶುಕ್ರವಾರ ನಸುಕಿನ 1.30ರವರೆಗೂ ಮುಂದುವರಿಯಿತು.
ವೇದಿಕೆ ಮರೆಯತಿಂದಲೇ ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ...’ ಗೀತೆ ತೇಲಿಬರುತ್ತಿದ್ದಂತೆಯೇ ಪ್ರೇಕ್ಷಕರ ಗ್ಯಾಲರಿಂದ ಹರ್ಷೋದ್ಘಾರ ಕೇಳಿಬಂತು. ಸಿಳ್ಳೆ, ಚಪ್ಪಾಳೆ, ಕೇಕೆಗಳ ಮೂಲಕ ಜನ ಗಾಯಕರಿಗೆ ಅಭಿನಂದನೆ ಸಲ್ಲಿಸಿಸದರು. ಮುಂದೆ ವಿಜಯಪ್ರಕಾಶ್ ಗಾಯನ ಕೇಳಿಬರುತ್ತಿದ್ದರೆ ಹಿಂದಿನ ಎಲ್‌ಇಡಿ ಪರದೆಯಲ್ಲಿ ನಟ ಪುನೀತ್ ಅವರ ಚಿತ್ರಪಟಗಳು ಬಿತ್ತರಗೊಂಡವು. ನೆಚ್ಚಿನ ನಟನ ಚಿತ್ರ ನೋಡಿದ ಅಭಿಮಾನಿಗಳಲ್ಲಿ ಪುಳಕ ಮೂಡಿತು. ಕಿಕ್ಕಿರಿದು ಸೇರಿದ್ದ ಜನಸ್ತೋಮ ಕೆಲ ಕ್ಷಣ ಭಾವಪರವಶವಾಯಿತು.
ಇದೇ ವೇಳೆ ಮೊಬೈಲ್ ಟಾರ್ಚ್ ಬೆಳಗಿಸಿದ ಅಭಿಮಾನಿಗಳು ನಟನಿಗೆ ನಮನ ಸಲ್ಲಿಸಿದರು.
ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನು, ರಾಜ್‌ಕುಮಾರ್ ಅಭಿನಯದ ‘ಲವ್ ಮಿ ಆರ್ ಹೇಟ್ ಮಿ, ದರ್ಶನ ಅಭಿನಯದ ‘ಯಾರೇ ಬಂದರೂ, ಎದುರು ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ, ಕಿರಿಕ್ ಪಾರ್ಟಿಯ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ, ರವಿಚಂದ್ರನ್ ಅಭಿನಯದ ಇದು ಹೂವಿನ ಲೋಕವೇ, ಇಲ್ಲಿ ಗೆಳತಿಯರಿಲ್ಲವೇ... ಗೀತೆಗಳು ಒಂದಾದ ಬಳಿಕ ಒಂದು ತೇಲಿಬಂದವು.
ಕಾಂತಾರ ಚಿತ್ರದ ‘ಸಿಂಗಾರ ಸಿರಿಯೆ’ ಹಾಡಿದಾಗಲಂತೂ ಜನ ಹುಚ್ಚೆದ್ದು ಕುಣಿದರು. ಬಳಿಕ ಬಂದ ‘ಕಣ್ಣು ಒಡೆಯಾಕ ಮೊನ್ನೆ ಕಲತನಿ’ ಹಾಡಿಗೆ ಯುವತಿಯರು ಇನ್ನಿಲ್ಲದಂತೆ ಸಂಭ್ರಮಿಸಿದರು. ‘ ಖಾಲಿ ಕ್ವಾಟರ್ ಬಾಟ್ಲಿಯಂಗೆ ಲೈಫು, ಆಚೆಗೇ ಹಾಕೌಳೆ ವೈಫು’ ಹಾಡಿಗೆ ಯುವಕರು ಕುರ್ಚಿಗಳ ಮೇಲೆದ್ದು ನಿಂತು ಕುಣಿದರು.
ಯುವಜನರು, ಮಕ್ಕಳು, ಮಹಿಳೆಯರೂ ಮೈ ಮರೆತು ಗಾಯನ ಮೋಡಿ ಆನಂದಿಸಿದರು.
ಸಂಗೀತ ರಸದೌತಣ: ರಾಣಿ ಚನ್ನಮ್ಮ ವೇದಿಕೆಯಲ್ಲಿ ಬಸವರಾಜ ಶಿಗ್ಗಾಂವ ಜನಪದ ಸಂಗೀತ, ಬಾಲಚಂದ್ರ ನಾಕೋಡ ಶಾಸ್ತ್ರೀಯ ಸಂಗೀತ, ನಾಗರಾಜ ಜೋರಾಪುರ ಹಾಸ್ಯ ಕಾರ್ಯಕ್ರಮ, ಆನಂದಪ್ಪ ಜೋಗಿನ ಕಿನ್ನರಿ ಪದಗಳು, ಯಲ್ಲನಗೌಡ ಬಂಡೆ ತತ್ವಪದಗಳು, ಸತೀಶ ಹೆಮ್ಮಾಡಿ ತಂಡದಿಂದ ಜಾದೂ ಪ್ರದರ್ಶನ ಮನರಂಜನೆ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.