ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ ತುಂಬುಗೆರೆಯಲ್ಲಿ ಬುಧವಾರ ನಡೆದ ದೋಣಿ ವಿಹಾರ ಜನಾಕರ್ಷಿಸಿತು.
ಸುಡು ಬಿಸಿಲಿನ ನಡುವೆ ಕೆರೆಯತ್ತ ಬಂದ ಜನ ತುಂಬುಕೆರೆಯ ದೋಣಿ ವಿಹಾರದಲ್ಲಿ ಕೆಲಹೊತ್ತು ನಲಿದರು. ದಶಕಗಳಿಂದ ನೀರು ಕಾಣದ ಐತಿಹಾಸಿಕ ಕೆರೆ ಈ ವರ್ಷ ಸುರಿದ ಭಾರಿ ಮಳೆಯಿಂದ ಮೈ ತುಂಬಿ ಹರಿಯುತ್ತಿರುವುದನ್ನು ಕಂಡು ಸಂಭ್ರಮಿಸಿದರು.
ಬ್ರಿಟಿಷರ ವಿರುದ್ಧ ಸಾಧಿಸಿದ ಜಯದ 200ನೇ ವರ್ಷಾಚರಣೆ ಅಂಗವಾಗಿ 15 ವರ್ಷಗಳ ಬಳಿಕ ಮತ್ತೆ ದೋಣಿ ವಿಹಾರ ನಡೆದದ್ದು ಉತ್ಸವದ ಸೊಬಗು ಹೆಚ್ಚಿಸಿತು. ತಂಡೋಪ ತಂಡವಾಗಿ ಬಂದ ಜನರು ನೀರಿನಲ್ಲಿ ತೇಲಿ ತಂಪಾದರು. ಜಲ ಸಾಹಸ ಮಾಡಿ ಖುಷಿ ಪಟ್ಟರು. ಇದು ಕಿತ್ತೂರು ಉತ್ಸವದ ಆಕರ್ಷಣೆ ಹಾಗೂ ಜನರ ಮನರಂಜನೆಗೆ ಒಳಗಾಯಿತು. ಇದೇ ವೇಳೆ ಜನ ಸಾಮಾನ್ಯರಿಗೂ ದೋಣಿ ವಿಹಾರ ಮಾಡಲು ಅನುಕೂಲವಾಗುವಂತೆ ದರ ನಿಗದಿ ಮಾಡಿ ಸುರಕ್ಷತೆಗೆ ಬೇಕಾಗುವ ಸಲಕರಣೆಗಳನ್ನು ಕಡ್ಡಾಯವಾಗಿ ಇಟ್ಟುಕೊಂಡು ವಿಹಾರಿಗಳಿಗೆ ವಿತರಿಸಬೇಕೆಂಬ ಮಾತುಗಳು ನಾಗರಿಕರಿಂದ ಕೇಳಿ ಬಂದವು.
ಜಿಲ್ಲಾ ಉತ್ತುವಾರಿ ಸಚಿವ ಸತೀಶ ಜಾರಕಿಹೊಳಿ ದೋಣಿ ವಿಹಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರ ಮನರಂಜನೆ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡಿದೆ. ಉತ್ಸವದಲ್ಲಿ ಮೂರು ದಿನಗಳಕಾಲ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೀಕ್ಷಣೆ ಮಾಡಿ ಕ್ರೀಡಾ ಮನೋಭಾವ ಮೆರೆಯಬೇಕು’ ಎಂದರು.
ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸಿಫ್ ಶೇಠ್, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅನೇಕರು ಇದ್ದರು.
ಮೂರು ದಿನ ತುಂಬುಗೆರೆಯಲ್ಲಿ ಜಟ್ ಸ್ಕೀ ಮೋಟಾರ್ ಬೋಟ್ ರ‍್ಯಾಫ್ಟಿಂಗ್ ಕಯಾಕಿಂಗ್ ಬನಾನ್ ರೇಡ್ ವಿವಿಧ ಜಲಸಾಹಸ ಕ್ರೀಡೆ ನಡೆಯಲಿವೆಬಿ.ಶ್ರೀನಿವಾಸ ಉಪನಿರ್ದೇಶಕ ಯುವ ಸಬಲೀಕರಣ ಕ್ರೀಡಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.