ADVERTISEMENT

ಕಿತ್ತೂರು ಉತ್ಸವ | ಇರಾನ್ ಪೈಲ್ವಾನ್ ಮಣಿಸಿದ ಉತ್ತರ ಪ್ರದೇಶದ ಜಾಂಟಿ

ಇಮಾಮ್‌ಹುಸೇನ್‌ ಗೂಡುನವರ
Published 25 ಅಕ್ಟೋಬರ್ 2024, 23:24 IST
Last Updated 25 ಅಕ್ಟೋಬರ್ 2024, 23:24 IST
ಕಿತ್ತೂರು ವಿಜಯೋತ್ಸವ ಅಂಗವಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಜನ ಸೇರಿದರು 
ಪ್ರಜಾವಾಣಿ ಚಿತ್ರ
ಕಿತ್ತೂರು ವಿಜಯೋತ್ಸವ ಅಂಗವಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಜನ ಸೇರಿದರು  ಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವದ ಪ್ರಯುಕ್ತ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರಪ್ರದೇಶದ ಜಾಂಟಿ ಭಾಟಿ ಅವರು, ಇರಾನ್ ದೇಶದ ಇರ್ಫಾನ್ ಹುಸೇನ್‌ಜಾದ್ ಶಾ ಅಲಿ ಅವರನ್ನು ಚಿತ್ ಮಾಡಿದರು.

ತುರುಸಿನಿಂದ ಕೂಡಿದ್ದ 33 ನಿಮಿಷಗಳ ಪಂದ್ಯದಲ್ಲಿ ಜಾಂಟಿ ಆರಂಭದಿಂದಲೂ ವಿದೇಶಿ ಜಟ್ಟಿ ಮೇಲೆ ಹಿಡಿತ ಸಾಧಿಸಿದರು. ‘ಡಬಲ್ ಲೆಗ್ ಅಟ್ಯಾಕ್’ ಮೂಲಕ ಇರ್ಫಾನ್ ಮಣಿಸಿ ಗೆಲುವಿನ ನಗೆ ಬೀರಿದರು.

ಮಹಾರಾಷ್ಟ್ರದ ಪ್ರಕಾಶ ಬನಕರ್ ಅವರು, ಲೆಗ್ ಅಟ್ಯಾಕ್ ಮೂಲಕ ಹರಿಯಾಣದ ರೋಹಿತ್ ಗುಲಿಯಾ ಅವರಿಗೆ ಸೋಲಿನ ರುಚಿ ತೋರಿಸಿದರು.

ADVERTISEMENT

ಹರಿಯಾಣದ ಅಂಕಿತ್ ಅವರು, ಚಡ್ಡಿ ಹಿಡಿದು ಸಕಿ ಡಾವ್ ಮೂಲಕ ಪಂಜಾಬಿನ ಗುರುಲಾಲ್ ಸಿಂಗ್ ಅವರನ್ನು ಸೋಲಿಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಶಿವಯ್ಯ ಪೂಜಾರಿ ಅವರು, ಜೋಲಿ ಡಾವ್ ಮೂಲಕ ಮಧ್ಯಪ್ರದೇಶದ ಪ್ರಿನ್ಸ್ ಸೋನಕರ ಅವರಿಗೆ ಮಣಿಸಿದರೆ, ಮಧ್ಯಪ್ರದೇಶದ ಸಚಿನ್ ವಿರುದ್ಧ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾರ್ತಿಕ ಕಾಟೆ ಗೆದ್ದರು.

ಮಹಾರಾಷ್ಟ್ರದ ಸಂತೋಷ ಪೂಜಾರಿ ವಿರುದ್ಧ ಧಾರವಾಡದ ನಾಗರಾಜ ಬಸಿಡೋಣಿ ಗೆಲುವು ಸಾಧಿಸಿದರೆ, ದಾವಣಗೆರೆಯ ಬಸವರಾಜ ಪಾಟೀಲ ವಿರುದ್ಧ ಬೆಳಗಾವಿಯ ಪ್ರಕಾಶ ಪಾಟೀಲ, ಮಹಾರಾಷ್ಟ್ರದ ಕಾರ್ತಿಕ ಬಾಚಟೆ ವಿರುದ್ಧ ಬೆಳಗಾವಿಯ ಶಿವಾನಂದ ದಡ್ಡಿ ಗೆದ್ದರು.

ಮಹಿಳೆಯರ ವಿಭಾಗದ ಕುಸ್ತಿಯಲ್ಲಿ ಮಹಾರಾಷ್ಟ್ರದ ಅಮೃತಾ ಪೂಜಾರಿ ಅವರು, ಡಾಕ್ ಡಾವ್ ಹಾಕುವ ಮೂಲಕ ಮಧ್ಯಪ್ರದೇಶದ ಪ್ರಾಂಜಲ್ ಸೋನಕರ ಅವರನ್ನು, ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಶಾಲಿನಿ ಸಿದ್ದಿ ಮಹಾರಾಷ್ಟ್ರದ ಅಸ್ಮಿತಾ ಪಾಟೀಲ ಅವರನ್ನು ಸೋಲಿಸಿದರು. ಮೈಸೂರಿನ ಯಶಸ್ವಿನಿ ಆರ್. ಅವರು, ಬೆಳಗಾವಿಯ ಶೀತಲ್ ಸುತಾರ ಅವರನ್ನು ಪರಾಭವಗೊಳಿಸಿದರು.

ಪುರುಷರ ವಿಭಾಗದಲ್ಲಿ 72 ಜೋಡಿ, ಮಹಿಳೆಯರ ವಿಭಾಗದಲ್ಲಿ 9 ಜೋಡಿ ಸೆಣಸಿದವು. ಹಲವು ಪಂದ್ಯಗಳು ಸಮಬಲವಾದವು. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಕೇಕೆ, ಸಿಳ್ಳೆಗಳ ಮೂಲಕ ಜಟ್ಟಿಗಳನ್ನು ಪ್ರೋತ್ಸಾಹಿಸಿದರು.

ಕಿತ್ತೂರು ವಿಜಯೋತ್ಸವ ಅಂಗವಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನ್‌ ಜಾಂಟಿ ಭಾಟಿ ಅವರು ಡಬಲ್‌ ಲೆಗ್‌ ಅಟ್ಯಾಕ್‌ ಮೂಲಕ ಇರ್ಫಾನ್‌ ಹುಸೇನ್‌ಜಾದ್‌ ಶಾ ಅಲಿ ಅವರನ್ನು ಸೋಲಿಸಿದರು  ಪ್ರಜಾವಾಣಿ ಚಿತ್ರ
ಜಾಂಟಿ ಭಾಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.