ADVERTISEMENT

ಕಿತ್ತೂರು ಉತ್ಸವ | ವಾಣಿಜ್ಯ ಮಳಿಗೆಗಳಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 14:30 IST
Last Updated 23 ಅಕ್ಟೋಬರ್ 2024, 14:30 IST
   

ಚನ್ನಮ್ಮನ ಕಿತ್ತೂರು: ಇಲ್ಲಿಯ ಕೋಟೆ ಆವರಣದಲ್ಲಿ ಆಯೋಜಿಸಿದ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಮೊದಲ ದಿನವೇ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜನಸಾಗರವೇ ಹರಿದು ಬಂತು.

‘ಮೊದಲ ದಿನವಾಗಿದ್ದರಿಂದ ಕೊಳ್ಳುವವರಿಗಿಂತ ನೋಡುವವರೆ ಹೆಚ್ಚಾಗಿದ್ದಾರೆ. ಇನ್ನು ಮೇಲೆ ವ್ಯಾಪಾರ ಆಗಬೇಕಷ್ಟೆ’ ಎಂದು ವರ್ತಕರು ಹೇಳಿದರು.

‘ಗ್ರಾಮೀಣ ಭಾಗದ ಉತ್ಪಾದಕರು ತಾವು ಸಿದ್ದಪಡಿಸಿದ್ದ ಆಹಾರ ಪದಾರ್ಥ, ಮತ್ತಿತರ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನು ಜನರು ಉಪಯೋಗಿಸಿಕೊಳ್ಳಬೇಕು’ ಎಂಬುದು ಕೈಗಾರಿಕೆ ಇಲಾಖೆಯ ಸಲಹೆ.

ADVERTISEMENT

‘ಮಳಿಗೆಯಲ್ಲಿ ಆಧುನಿಕ ಕೃಷಿ ಉಪಕರಣ, ಹೊಸತಳಿ, ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜ, ಹೊಸ ಕಬ್ಬಿನ ತಳಿ, ಹನಿ, ತುಂತುರ ನೀರಾವರಿ, ತೋಟಗಾರಿಕೆ ಕೃಷಿಗೆ ಬಳಸುವ ಕೆಲವು ಉಪಕರಣಗಳನ್ನು ಪರಿಚಯಿಸಲು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೃಷಿ ಇಲಾಖೆ ಸಹಾಯಧನ ಅಡಿ ದೊರೆಯುವ ವಸ್ತುಗಳೇ ಇವುಗಳಲ್ಲಿ ಹೆಚ್ಚಾಗಿವೆ ಎಂದು ಸುಬಾನಿ ಮುಲ್ಲಾ ತಿಳಿಸಿದರು.

‘ದೀಪಗಳ ಹಬ್ಬ ದೀಪಾವಳಿ ಇನ್ನೇನು ಹೊಸ್ತಿಲಿಗೆ ಬಂದಿದೆ. ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ವೈವಿಧ್ಯಮಯ ಮಣ್ಣಿನ ಹಣತೆ ಮಾರಾಟಕ್ಕೆ ತರಲಾಗಿದೆ. ಗ್ರಾಹಕ ಭೇಟಿ ನೀಡಿ ಹೋಗುತ್ತಿದ್ದಾರೆ. ಪ್ರತಿ ಉತ್ಸವದಲ್ಲಿ ವಹಿವಾಟು ಚೆನ್ನಾಗಿರುತ್ತದೆ’ ಎಂದು ಭರವಸೆಯಿಂದ ನುಡಿದವರು ಮುರಗೋಡದ ಶಿವಾನಂದ ಕುಂಬಾರ.

ಈ ಮಳಿಗೆಯಲ್ಲಿ ಕುರುಕಲು ತಿಂಡಿ, ತಿನಿಸುಗಳಿಗೆ ಕೊರತೆಯಿಲ್ಲ. ‘ರಾಗಿ ತಿಂದವ ನಿರೋಗಿ’ ಎಂದು ಕೂಗುತ್ತ ರಾಗಿಯಲ್ಲಿ ಸಿದ್ಧಪಡಿಸಲಾಗಿದ್ದ ಹಪ್ಪಳ ಸೇರಿ ವಿವಿಧ ಖಾದ್ಯಗಳ ಮಾರಾಟ ಮಾಡಲು ದೂರದ ಬೀದರದಿಂದ ಸಂತೋಷ ಗಣಪತಿ ಇಲ್ಲಿಗೆ ಬಂದಿದ್ದಾರೆ.

ಸಾವಯವ ಆಹಾರಧಾನ್ಯ, ಬೆಲ್ಲ, ನೋವು ನಿವಾರಕ ಔಷಧಗಳು, ಅಂಕಲಿಪಿ, ಪುಸ್ತಕ, ಸೀರೆ, ಬಳೆ, ತರಹೇವಾರಿ ವ್ಯಾನಿಟಿ ಬ್ಯಾಗ್, ವಿದ್ಯುತ್ ಮತ್ತು ಕಟ್ಟಿಗೆ ಮೂಲಕ ನೀರು ಕಾಯಿಸುವ ಬಾಯ್ಲರ್ ಮಾರಾಟದ ಮಳಿಗೆಗಳು ಇಲ್ಲಿವೆ. ಬಾಯಿ ಚಪ್ಪರಿಸಲು ಗಿರಮಿಟ್, ಭಜಿ, ಐಸ್ಕ್ರೀಂ ಅಂಗಡಿಗಳಿಗೆ ಕೊರತೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.