ADVERTISEMENT

KLE ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಡೆಸಿದ ರೊಬಾಟಿಕ್‌ ಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 12:33 IST
Last Updated 17 ಜುಲೈ 2024, 12:33 IST
<div class="paragraphs"><p>ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವೈದ್ಯರು ರೊಬಾಟಿಕ್‌ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ನೆರವೇರಿಸಿದರು</p></div>

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವೈದ್ಯರು ರೊಬಾಟಿಕ್‌ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ನೆರವೇರಿಸಿದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೊಬಾಟಿಕ್‌ ತಂತ್ರಜ್ಞಾನ ಬಳಸಿ ಇಬ್ಬರಿಗೆ ಯಶಸ್ವಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಕೇಂದ್ರದ ವೈದ್ಯಕೀಯ ನಿರ್ದೆಶಕ ಕರ್ನಲ್‌ ಡಾ. ಎಂ. ದಯಾನಂದ ಹೇಳಿದರು.

ADVERTISEMENT

‘ಅನ್ನನಾಳ ಕ್ಯಾನ್ಸರಿನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ಇಬ್ಬರು ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಇದು ಉತ್ತರ ಕರ್ನಾಟಕದಲ್ಲಿ ನಡೆದ ಮೊದಲ ಪ್ರಯೋಗ. ಕೆಎಲ್‌ಇ ಆಸ್ಪತ್ರೆ ಇಂಥ ಹೊಸತನಗಳಿಗೆ ಯಾವಾಗಲೂ ಮುಂದಿದೆ’ ಎಂದು ಅವರು ಆಸ್ಪತ್ರೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೈದ್ಯವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ. ರೊಬಾಟಿಕ್ ತಂತ್ರಜ್ಞಾನ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಸಹಕಾರಿ ಎಂಬುದನ್ನು ಸಾಬೀತು ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಕರ್ನಲ್‌ ಡಾ.ಎಂ. ದಯಾನಂದ

‘ಕಳೆದ ಮೂರು ದಶಕಗಳ ಹಿಂದೆ ವೈದ್ಯವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೊಬಾಟಿಕ್ ಇಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಅದ್ಭುತ ಕೊಡುಗೆ ನೀಡುತ್ತ ನಿರಂತರವಾಗಿ ಅಭಿವೃದ್ದಿಗೊಳ್ಳುತ್ತಿದೆ. ಅತ್ಯಂತ ಕ್ಲಿಷ್ಟಕರವಾದ ಹಾಗೂ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ರೊಬಾಟಿಕ್‌ನಿಂದ ವೈದ್ಯರು ನೆರವೇರಿಸಲು ಸಹಕಾರಿಯಾಗಲಿದೆ’ ಎಂದರು.

‘3ಡಿ ತಂತ್ರಜ್ಞಾನ, ತೀಕ್ಷ್ಣವಾದ ಕ್ಯಾಮೆರಾ ಹಾಗೂ ಅತ್ಯಾಧುನಿಕ ಉಪರಣಗಳನ್ನು ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಬಹುದು. ಇದರಿಂದ ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ’ ಎಂದರು.

‘ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೊಬಾಟಿಕ್ ಶಸ್ತ್ರಚಿಕಿತ್ಸೆಗೆ ಸಣ್ಣ ರಂದ್ರದ ಅಗತ್ಯವಿರುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಗಗಳಿಗೆ ಕಡಿಮೆ ತೊಂದರೆ ಉಂಟಾಗುತ್ತದೆ. ಅಲ್ಲದೇ, ರಕ್ತಸ್ರಾವ ಕಡಿಮೆಗೊಂಡು ರೋಗಿಗಳು ಶೀಘ್ರ ಗುಣಮುಖಗೊಳ್ಳುತ್ತಾರೆ’ ಎಂದು ಕ್ಯಾನ್ಸರ್‌ ತಜ್ಞ ಡಾ.ಕುಮಾರ ವಿಂಚುರಕರ ತಿಳಿಸಿದರು.

‘ರೊಬಾಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸಕರಿಗೆ ಸಾಂಪ್ರದಾಯಿಕ ಲ್ಯಾಪರೊಸ್ಕೋಪಿಕ್ ಉಪಕರಣಕ್ಕಿಂತ ಹೆಚ್ಚು ಸಹಕಾರಿ. ದೀರ್ಘಾವಧಿವರೆಗಿನ ಶಸ್ತ್ರಚಿಕಿತ್ಸೆಗಳನ್ನು ಅನಾಯಾಸವಾಗಿ ನೆರವೇರಿಸುವುದರಿಂದ ಶಸ್ತ್ರಚಿಕಿತ್ಸಕರ ಮೆಲಿನ ದೈಹಿಕ ಒತ್ತಡವನ್ನು ಕಡಿಮೆ ಮಾಡಲಿದೆ’ ಎಂದು ಕ್ಯಾನ್ಸರ್ ತಜ್ಞ ಡಾ.ಮಹೇಶ ಕಲ್ಲೊಳ್ಳಿ ಹೇಳಿದರು.

‘ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹೋಲಿಸಿದರೆ ರೊಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಲ್ಲಿ ಸೋಂಕಿನ ಅಪಾಯ ಕಡಿಮೆ. ಶೀಘ್ರ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ. ಇಷ್ಟೆಲ್ಲ ಒಳ್ಳೆಯ ಪರಿಣಾಮ ಬೀರಿದರೂ ಉಪಕರಣಗಳ ದುಬಾರಿ ವೆಚ್ಚದಿಂದಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕಷ್ಟವಾಗಿದೆ’ ಎಂದು ಡಾ.ದಿವಾಕರ ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೊಬಾಟಿಕ್ ತಂತ್ರಜ್ಞಾನವನ್ನು ಕೆಎಲ್ಇ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಭಾರತದಲ್ಲಿಯೇ ತಯಾರಿಸಿದ ಎಸ್ಎಸ್ಐ ತಂತ್ರಜ್ಞಾನ ಸರ್ಜಿಕಲ್ ರೊಬಾಟಿಕ್ ಇದಾಗಿದೆ’ ಎಂದು ಕ್ಯಾನ್ಸರ ಶಸ್ತ್ರಚಿಕಿತ್ಸಕ ಡಾ.ರಾಹುಲ್ ಕಿನವಾಡೆಕರ ಮಾಹಿತಿ ನೀಡಿದರು.

ಅರಿವಳಿಕೆ ತಜ್ಞವೈದ್ಯ ಡಾ.ರಾಜೇಶ ಮಾನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.