ಬೆಳಗಾವಿ: ನಗರದಲ್ಲಿ ಸೋಮವಾರ ನಡೆದ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಾಹೇರ್) 14ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ ಅವರು ಘಟಿಕೋತ್ಸವ ಭಾಷಣ ಮಾಡಿದರು. ಒಟ್ಟು 1,739 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಕಾಹೇರ್‌ನಿಂದ ಇದೇ ಮೊದಲ ಬಾರಿಗೆ ನೀಡಲಾದ ‘ಗೌರವ ಡಾಕ್ಟರೇಟ್’ ಅನ್ನು ಅಮೆರಿಕದ ಫಿಲಿಡೆಲ್ಫಿಯಾದ ಥಾಮಸ್ ಝೆಫರ್ಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ಡಾ.ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಪ್ರದಾನ ಮಾಡಿದರು. ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಪರಿಗಣಿಸಿ ಈ ಪದವಿ ನೀಡಲಾಯಿತು. ಡರ್ಮನ್ ಅವರು ಪದವಿಯನ್ನು ತಮ್ಮ ಸಹ ಸಂಶೋಧಕರಾಗಿದ್ದ ಡಾ.ಬಿ.ಎಸ್.ಕೊಡಕಣಿ ಅವರಿಗೆ ಸಮರ್ಪಿಸಿದರು.
45 ಚಿನ್ನದ ಪದಕಗಳು, 30 ಪಿಎಚ್‌ಡಿಗಳು, 13 ಸ್ನಾತಕೋತ್ತರ (ಡಿ.ಎಂ/ ಎಂ.ಸಿಎಚ್), 644 ಸ್ನಾತಕೋತ್ತರ ಪದವಿ, 1,023 ಪದವಿ, 9 ಸ್ನಾತಕೋತ್ತರ ಡಿಪ್ಲೊಮಾ, 4 ಡಿಪ್ಲೊಮಾ, 5 ಫೆಲೋಶಿಪ್ ಮತ್ತು 11 ಪ್ರಮಾಣಪತ್ರ ಕೋರ್ಸ್‌ಗಳನ್ನೂ ಉಪರಾಷ್ಟ್ರಪತಿ ಪ್ರದಾನ ಮಾಡಿದರು.
ಕಾಹೇರ್‌ನ ಕುಲಾಧಿಪತಿ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಜಗದೀಪ್ ಧನಕರ ಪತ್ನಿ ಸುದೇಶ, ಕುಲಪತಿ ಡಾ.ನಿತಿನ್ ಗಂಗಾನೆ, ಪರೀಕ್ಷಾ ನಿಯಂತ್ರಕಿ ಡಾ.ಚಂದ್ರಾ ಮೆಟಗುಡ್ಡ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.