ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ವಿಶ್ವದ ಇತರ ರಾಷ್ಟ್ರಗಳಿಗಿಂತ ಅಗ್ಗದ ಡಾಟಾ ಭಾರತದಲ್ಲೇ ಸಿಗುತ್ತದೆ. ಡಿಜಿಟಲ್ ಡೌನ್‌ಲೋಡ್ ಹಾಗೂ ಡಾಟಾ ಬಳಸುವಲ್ಲಿ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ’ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ ಹೇಳಿದರು.
ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಮೆರಿಕಗಿಂತ ಮೂರು ಪಟ್ಟು ಡಿಜಿಟಲ್ ಪೇಮೆಂಟ್‌ಗಳು ಭಾರತದಲ್ಲಿ ಆಗುತ್ತಿವೆ. ಇದರಿಂದ ಆರ್ಥಿಕ ಸೋರಿಕೆ ನಿಂತಿದೆ. ಅರಬ್ ದೇಶಗಳಿಗೂ ನಾವು ಡಿಜಿಟಲ್ ತಂತ್ರಜ್ಞಾನ ಸರಬರಾಜು ಮಾಡುವಷ್ಟು ಬೆಳೆದಿದ್ದೇವೆ’ ಎಂದರು.
‘ಕಳೆದ 10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಡಿಜಿಟಲ್ ಕ್ರಾಂತಿಗೆ ಹೆಜ್ಜೆ ಇಟ್ಟರು. ಇಂದು ಇಡೀ ದೇಶದಲ್ಲಿ ‘ಕ್ಯಾಶ್‌ಲೆಸ್’ ವ್ಯವಸ್ಥೆ ಮುಂದುವರಿದಿದೆ. ಇದರಿಂದ ಭಾರತದತ್ತ ವಿಶ್ವದ ದೃಷ್ಟಿಕೋನ ಬದಲಾಗಿದೆ’ ಎಂದು ಹೇಳಿದರು.
‘2014ರವರೆಗೆ ದೇಶದಲ್ಲಿ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದವು. ವಿದೇಶಕ್ಕೆ ಹೋಗಲು ಪರದಾಡುವ ಸ್ಥತಿ ಇತ್ತು. ಈಗ 527 ಕೇಂದ್ರಗಳಿವೆ. ತ್ವರಿತ ಹಾಗೂ ಸುರಕ್ಷಿತ ಪಾಸ್‌ಪೋರ್ಟ್ ಸುಲಭವಾಗಿ ಸಿಗುವಂತಾಗಿದೆ’ ಎಂದರು.
‘ಮೋದಿ ಸರ್ಕಾರದ 10 ವರ್ಷಗಳನ್ನು ವಿಂಗಡಿಸಿದರೆ ಪ್ರತಿದಿನ ಎರಡು ಕಾಲೇಜುಗಳು, ವಾರಕ್ಕೆ ಒಂದು ವಿಶ್ವವಿದ್ಯಾಲಯ, ವಾರ್ಷಿಕ ಎಂಟು ಹೊಸ ವಿಮಾನ ನಿಲ್ದಾಣಗಳು, ಪ್ರತಿದಿನ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ’ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ‘ಕೆಎಲ್‌ಇ ಸಂಸ್ಥೆ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ’ ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘310 ಅಂಗ ಸಂಸ್ಥೆಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯಲ್ಲಿ 1.40 ಲಕ್ಷ ವಿದ್ಯಾರ್ಥಿಗಳು ಇದ್ದಾರೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.