ADVERTISEMENT

ಕನ್ನಡದ ಬೆಳವಣಿಗೆಗೆ ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರ– ಪ್ರಭಾಕರ ಕೋರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 13:43 IST
Last Updated 6 ಜನವರಿ 2024, 13:43 IST
   

ಬೆಳಗಾವಿ: ‘ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ಕೆಎಲ್‍ಇ ಸಂಸ್ಥೆ ನಿರಂತರವಾಗಿ ಶ್ರಮಿಸಿದೆ. ಬೆಳಗಾವಿಯಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ನಮ್ಮ ಸಂಸ್ಥೆಯ ಕೊಡುಗೆಯೂ ಅಪಾರವಾಗಿದೆ’ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ನುಡಿ ವೈಭವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಎಲ್ಇ ಸಂಸ್ಥೆ ಹಲವು ದಶಕಗಳಿಂದ ಕನ್ನಡ ಉಳಿಸಿ, ಬೆಳೆಸುವ ಕಾಯಕದಲ್ಲಿ ತೊಡಗಿದೆ. ಯುವಪೀಳಿಗೆಗೆ ಕನ್ನಡ ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸುತ್ತಿದೆ’ ಎಂದರು.

‘ಶ್ರೇಷ್ಠ ಕವಿಗಳಾದ ಡಿ.ಎಸ್. ಕರ್ಕಿ, ಚಂದ್ರಶೇಖರ ಕಂಬಾರ ಅವರಂತಹ ಮಹನೀಯರನ್ನು ಕೆಎಲ್‌ಇ ಸಂಸ್ಥೆ ರೂಪಿಸಿದೆ. ಇವರು ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ, ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ್ದಾರೆ. ನಾವೆಲ್ಲರೂ ಕನ್ನಡ ಭಾಷೆ ಪ್ರೀತಿಸಬೇಕು. ನಾವೇ ಮಾತೃಭಾಷೆ ಪ್ರೀತಿಸದಿದ್ದರೆ, ಇನ್ಯಾರು ಪ್ರೀತಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘ಈ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಜನಪದ ಉತ್ಸವ, ಕನ್ನಡ ಹಬ್ಬಗಳನ್ನು ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇಂಥ ಕಾರ್ಯಕ್ರಮ ನಿರಂತರವಾಗಿ ಜರುಗಬೇಕು. ವಿದ್ಯಾರ್ಥಿಗಳಿಂದಲೂ ಕನ್ನಡಮಯ ವಾತಾವರಣ ನಿರ್ಮಾಣ ಕೆಲಸ ಅನುದಿನವೂ ಆಗಬೇಕು’ ಎಂದು ಆಶಿಸಿದರು.

ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ‘ಕನ್ನಡ ಭಾಷೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಪ್ರಾದೇಶಿಕ ಭಾಷೆ ಪ್ರೀತಿಸುವ ಜತೆಗೆ, ಅನ್ಯ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಬೇಕು’ ಎಂದು ಕರೆ ನೀಡಿದರು.

ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ವಿಜಯಲಕ್ಷ್ಮಿ ತಿರ್ಲಾಪೂರ, ‘ಜನಪದ ಭಾಷೆ ಶ್ರೀಮಂತವಾದದ್ದು. ಗ್ರಾಮೀಣ ಭಾಗದ ಜನರ ಉಡುಗೆ–ತೊಡುಗೆ, ನಡೆ–ನುಡಿಯಲ್ಲಿ ಕನ್ನಡ ಸಂಸ್ಕೃತಿ ಕಾಣಬಹುದು’ ಎಂದರು.

ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ರಾಣಿ ಚನ್ನಮ್ಮ ಬ್ಯಾಂಕಿನ ಅಧ್ಯಕ್ಷೆ ಆಶಾ ಕೋರೆ, ವಿ.ಸಿ.ಕಾಮಗೋಳ ಉಪಸ್ಥಿತರಿದ್ದರು ಪ್ರಾಚಾರ್ಯೆ ಜ್ಯೋತಿ ಕವಳೇಕರ ಸ್ವಾಗತಿಸಿದರು. ಮಹಾದೇವಿ ಹುಣಶಿಬೀಜ ವಂದಿಸಿದರು. ಎಸ್.ಬಿ.ಬನ್ನಿಮಟ್ಟಿ ಮತ್ತು ಶಿಲ್ಪಾ ರುದ್ರನ್ನವರ ನಿರೂಪಿಸಿದರು. ನಂತರದಲ್ಲಿ ಸಂಗೀತ, ನೃತ್ಯ, ಚಿಂತನೆ ಮತ್ತಿತರ ಕಾರ್ಯಕ್ರಮ ನಡೆದವು.

ಇದಕ್ಕೂ ಮುನ್ನ ನಡೆದ ನಾಡದೇವಿ ಭುವನೇಶ್ವರಿ ಭವ್ಯ ಮೆರವಣಿಗೆಗೆ ಪ್ರಭಾಕರ ಕೋರೆ ಚಾಲನೆ ನೀಡಿದರು. ಸಾಂಪ್ರದಾಯಿಕ ದಿರಿಸಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಕನ್ನಡದ ತೇರು ಎಳೆದರು. ಕನ್ನಡ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.