ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನರಶಸ್ತ್ರಚಿಕಿತ್ಸಕ ವೈದ್ಯರ ತಂಡವು 25 ವರ್ಷದ ಮಹಿಳೆಯಲ್ಲಿ ಆಳವಾಗಿ ಬೆಳೆದಿದ್ದ ಮಿದುಳು ಗಡ್ಡೆಯನ್ನು ‘ನ್ಯುರೋಎಂಡೋಸ್ಕೊಪ್ ತಂತ್ರಜ್ಞಾನ’ದ ಸಹಾಯದಿಂದ ಅತ್ಯಂತ ಯಶಸ್ವಿಯಾಗಿ ಛೇದಿಸಿ ಸಂಪೂರ್ಣವಾಗಿ ಹೊರತೆಗೆದಿದ್ದಾರೆ. ತೀವ್ರ ತಲೆ ನೋವು ಹಾಗೂ ವಾಂತಿ–ಭೇದಿಯಿಂದ ಬಳಲುತ್ತಿದ್ದ ಮಹಿಳೆ ಈಗ ಗುಣಮುಖವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ.
‘ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರ ಹಾಗೂ ಸವಾಲಿನದಾಗಿತ್ತು. ಏಕೆಂದರೆ ಗಡ್ಡೆ ಮಿದುಳಿನ ಮಧ್ಯ ಭಾಗಕ್ಕೆ ಅತ್ಯಂತ ಸಮೀಪದಲ್ಲಿ ಆಳವಾಗಿ ಬೆಳೆದಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ನಿಖರ ಮತ್ತು ಜಾಗರೂಕತೆಯಿಂದ ಮಿದುಳಿದ ಯಾವುದೇ ರೀತಿಯ ಪೆಟ್ಟು ತಗುಲದಂತೆ ನಿರ್ವಹಿಸಬೇಕಾಗಿತ್ತು’ ಎಂದು ತಿಳಿಸಿದೆ.
‘ಇಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂರೋಎಂಡೋಸ್ಕೊಪ್ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಒಂದೇ ಕೀ–ಹೋಲ್ ಮೂಲಕ ಶಸ್ತ್ರಕ್ರಿಯೆ ನಡೆಸಲಾಯಿತು. ಈ ತಂತ್ರಜ್ಞಾನವು ಇಂತಹ ಆಳವಾದ ಮಿದುಳು ಗಡ್ಡೆಗಳ ಯಶಸ್ವಿ ಶಸ್ತ್ರಚಿಕಿತ್ಸೆಗೆ ಬಹಳ ಸಹಕಾರಿಯಾಗಿದೆ. ಏಕೆಂದರೆ ಇದು ಕಿರಿದಾದ ಮಿದುಳಿನ ಕಿಟಕಿಯ ಮೂಲಕ ಗಡ್ಡೆಯ ಗರಿಷ್ಠ ನೋಟ ಒದಗಿಸುತ್ತದೆ. ಹೀಗಾಗಿ ಇದು ಮಿದುಳಿನ ಗಾಯವನ್ನು ಅತ್ಯಂತ ಕಡಿಮೆಗೊಳಿಸುತ್ತದೆ’ ಎಂದು ನ್ಯೂರೋಸರ್ಜನ್‌ಗಳಾದ ಡಾ.ಅಭಿಷೇಕ್ ಪಾಟೀಲ, ಡಾ.ವಿಕ್ರಮ ಟಿ.ಪಿ., ಡಾ.ಪ್ರಕಾಶ್ ರಾಥೋಡ್ ಮತ್ತು ನ್ಯುರೋ ಅರವಳಿಕೆ ತಜ್ಞೆ ಡಾ.ಟೀನಾ ದೇಸಾಯಿ ತಿಳಿಸಿದ್ದಾರೆ.
‘ನಮ್ಮ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಒದಗಿಸಲಾದ ಜಾಗತಿಕ ದರ್ಜೆಯ ಸೌಲಭ್ಯಗಳನ್ನು ಸರಿಯಾಗಿ ಬಳಸಿ ರೋಗಿಗಳಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ. ನ್ಯೂರೋ ನೇವಿಗೇಶನ್, ಮೈಕ್ರೋಸ್ಕೋಪ್‌ನಂತಹ ಹೊಸ ತಂತ್ರಜ್ಞಾನದೊಂದಿಗೆ ಈಗ ನ್ಯುರೋಎಂಡೋಸ್ಕೋಪ್ ತಂತ್ರಜ್ನ್ಯಾನವನ್ನೂ ಅಳವಡಿಸಲಾಗಿದೆ’ ಎಂದು ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಹೇಳಿದ್ದಾರೆ.
ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.