ಬೆಳಗಾವಿ: ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬದವರಿಗೆ ಕೆಪಿಸಿಸಿಯಿಂದ ₹ 11 ಲಕ್ಷ ಪರಿಹಾರವನ್ನು ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರಬೆಳಗಾವಿ ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಪರಿಹಾರ ವಿತರಿಸಿದರು.
ಸಂತೋಷ್ ಪತ್ನಿ ಜಯಶ್ರೀ ಹಾಗೂ ತಾಯಿ ಪಾರ್ವತಿ ಪಾಟೀಲ ಅವರಿಗೆ ಚೆಕ್ ಅನ್ನು ನೀಡಿದರು. ಇದೇ ವೇಳೆ ಚಿಕ್ಕೋಡಿಯ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ವೈಯಕ್ತಿಕವಾಗಿ ನೀಡಿದ ₹ 5 ಲಕ್ಷ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಪಾರ್ವತಿ ಪಾಟೀಲ, ನನ್ನ ಮಗ ಕೆಲಸ ಮಾಡಿರುವುದು ನಿಜ. ಅವನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದರು. ಮಗನನ್ನು ನೆನೆದು ಕಣ್ಣೀರಿಟ್ಟರು.
ಇದಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ನಿಮ್ಮ ಮಗ ಕೆಲಸ ಮಾಡಿರುವುದನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಶಾಸಕ ರಮೇಶ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ. ಅವೆಲ್ಲವನ್ನೂ ಇಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇಳಲಾಗುವುದು ಎಂದು ಶಿವಕುಮಾರ್ ಧೈರ್ಯ ತುಂಬಿದರು.
ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಮಹಾಂತೇಶ ಕೌಜಲಗಿ, ಡಾ.ಅಂಜಲಿ ನಿಂಬಾಳ್ಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಮುಖಂಡ ಫಿರೋಜ್ ಸೇಠ್ ಇದ್ದರು.
ನಂತರ ಡಿ.ಕೆ. ಶಿವಕುಮಾರ್ ಅವರು ಕುಟುಂಬದವರೊಂದಿಗೆ ಗೋಪ್ಯವಾಗಿ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.