ADVERTISEMENT

ಮೂಡಲಗಿ: ಸಮಗ್ರ ಕೃಷಿಯಲ್ಲಿ ಬಸವಣ್ಣಿ ಖುಷಿ

ವಿವಿಧ ಬೆಳೆ ಬೆಳೆದು, ಉತ್ತಮ ಆದಾಯ ಗಳಿಸುತ್ತಿರುವ ಗುರ್ಲಾಪುರದ ರೈತ ಬಸವಣ್ಣಿ ಮುಗಳಖೋಡ

ಬಾಲಶೇಖರ ಬಂದಿ
Published 14 ಜೂನ್ 2024, 6:06 IST
Last Updated 14 ಜೂನ್ 2024, 6:06 IST
ಮೂಡಲಗಿ ತಾಲ್ಲೂಕಿನ ಗುರ್ಲಾಪುರದ ಜಮೀನಿನಲ್ಲಿ ಬೆಳೆದ ಸಿಹಿಯಾದ ಗೋವಿನಜೋಳ ಬೆಳೆಯೊಂದಿಗೆ ರೈತ ಬಸವಣ್ಣಿ ಮುಗಳಖೋಡ
ಮೂಡಲಗಿ ತಾಲ್ಲೂಕಿನ ಗುರ್ಲಾಪುರದ ಜಮೀನಿನಲ್ಲಿ ಬೆಳೆದ ಸಿಹಿಯಾದ ಗೋವಿನಜೋಳ ಬೆಳೆಯೊಂದಿಗೆ ರೈತ ಬಸವಣ್ಣಿ ಮುಗಳಖೋಡ   

ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಗ್ರಾಮದ ರೈತ ಬಸವಣ್ಣಿ ಚಿಣ್ಣಪ್ಪ ಮುಗಳಖೋಡ ಒಂದೇ ಬೆಳೆ ನೆಚ್ಚಿಕೊಳ್ಳದೆ, ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ಯಶ ಕಂಡಿದ್ದಾರೆ. ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಿ.ಎಸ್ಸಿ ಪದವೀಧರರಾದ ಬಸವಣ್ಣಿ 40 ಎಕರೆ ಜಮೀನು ಹೊಂದಿದ್ದಾರೆ. ನೌಕರಿಗಾಗಿ ಬೆನ್ನು ಹತ್ತದೆ, ಒಕ್ಕಲುತನದಲ್ಲೇ ಖುಷಿ ಕಾಣುತ್ತಿದ್ದಾರೆ.

‘ನಾನು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4 ಅಡಿ ಬಿಟ್ಟು, ಕಬ್ಬಿನ ಬೆಳೆ ನಾಟಿ ಮಾಡಿದ್ದೇನೆ. ಮಿಶ್ರ ಬೆಳೆಗಳಾಗಿ ಅರಿಸಿನ, ಗೋವಿನಜೋಳ, ಗೋಧಿ, ಸದಕ ಬೆಳೆಯುತ್ತಿದ್ದೇನೆ. ಒಂದು ತೆರೆದ ಬಾವಿ, ಮೂರು ಕೊಳವೆಬಾವಿ ಇವೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಕಡಿಮೆ ನೀರಿದ್ದರೂ, ಎಲ್ಲ ಬೆಳೆಗಳಿಗೂ ಸಮರ್ಪಕವಾಗಿ ಉಣಿಸಲು ಸಾಧ್ಯವಾಗಿದೆ’ ಎಂದು ಬಸವಣ್ಣಿ ಮುಗಳಖೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಪ್ರತಿ ಎಕರೆಗೆ 50ರಿಂದ 55 ಟನ್‌ ಕಬ್ಬು ಬೆಳೆಯುತ್ತಿದ್ದೇನೆ. ಮಿಶ್ರ ಬೆಳೆಗಳಾಗಿ ಎಕರೆಗೆ 30ರಿಂದ 35 ಕ್ವಿಂಟಲ್‌ ಅರಿಸಿನ ಬೆಳೆಯುತ್ತಿದ್ದೇನೆ. ಎರಡೂವರೆ ತಿಂಗಳಿಂದ ಸಿಹಿಯಾದ ಗೋವಿನಜೋಳ(ಸ್ವೀಟ್‌ ಕಾರ್ನ್‌) ಬೆಳೆಯುತ್ತಿದ್ದು, ಎಕೆರೆಗೆ ₹35 ಸಾವಿರದಿಂದ ₹40 ಸಾವಿರ ಕೈಗೆಟುಕುಗುತ್ತಿದೆ’ ಎಂದರು.

ADVERTISEMENT

‘ಕಳೆದೊಂದು ದಶಕದಿಂದ ಅರಿಸಿನ ಬೆಳೆಯುತ್ತಿದ್ದೇನೆ. ಈ ಬಾರಿ ಏಳು ಎಕರೆಯಲ್ಲಿ ಅರಿಸಿನ ಬೆಳೆಯಿದೆ. ಪ್ರತಿ ಕ್ವಿಂಟಲ್‌ಗೆ ₹18 ಸಾವಿರ ದರ ಸಿಕ್ಕಿದ್ದರಿಂದ ಖುಷಿಯಾಗಿದೆ’ ಎಂದು ಸಂತಸಪಟ್ಟರು.

ನಮ್ಮದು ಅವಿಭಕ್ತ ಕುಟುಂಬ. ಸಹೋದರಾದ ಪರಪ್ಪ ಶಿವಲಿಂಗ ಮಕ್ಕಳಾದ ರವಿ ಗಿರೆಪ್ಪ ಮತ್ತು ಕುಟುಂಬದವರೆಲ್ಲರೂ ಕೃಷಿಯಲ್ಲಿ ತೊಡಗಿದ್ದರಿಂದ ಉತ್ತಮ ಆದಾಯ ಕೈಸೇರುತ್ತಿದೆ

–ಬಸವಣ್ಣಿ ಮುಗಳಖೋಡ ರೈತ

ಕೈಹಿಡಿದ ಹೈನುಗಾರಿಕೆ

ಬಸವಣ್ಣಿ ಅವರು ವಿವಿಧ ತಳಿಗಳ ಎಮ್ಮೆ ಆಕಳು ಮೇಕೆ ಕೋಳಿ ಸಾಕಿದ್ದಾರೆ. ಜವಾರಿ ಎಚ್‌ಎಫ್‌ ಕೃಷ್ಣಾ ಪಂಡರಪುರಿ ಹಸುಗಳು ಜವಾರಿ ಮಂಡ್ಯ ಗವಳಿ ಹರಿಯಾಣ ಮೌಳಿ ಎಮ್ಮೆಗಳು ಅವರ ಬಳಿ ಇವೆ. 8 ಗುಂಟೆ ಬಯಲಿನಲ್ಲಿ ಜಾನುವಾರುಗಳನ್ನು ಮುಕ್ತವಾಗಿ ಬಿಟ್ಟಿದ್ದಾರೆ. ಹಾಗಾಗಿ ಶೂನ್ಯ ವೆಚ್ಚದಲ್ಲೇ ಅವುಗಳ ನಿರ್ವಹಣೆ ಸಾಧ್ಯವಾಗಿದೆ. ಎಮ್ಮೆ ಮತ್ತು ಆಕಳುಗಳಿಗೆ ಪ್ರತ್ಯೇಕ ವಿಭಾಗವಿದ್ದು ಅವು ತಮ್ಮ ಪಾಡಿಗೆ ಅಡ್ಡಾಡಿಕೊಂಡು ಮೇವು ತಿನ್ನುತ್ತವೆ. ಜಾನುವಾರುಗಳ ನೆರಳಿಗಾಗಿ ಶೆಡ್‌ ನಿರ್ಮಿಸಿದ್ದಾರೆ. ಗೋವಿನ ಜೋಳದ ಕಣಕಿ ಕಬ್ಬಿಣ ವಾಡಿ ಸಜ್ಜಿ ಮೇವು ಚೊಗಚಿಯನ್ನು ಯಂತ್ರದಲ್ಲಿ ಕತ್ತರಿಸಿ ಪ್ರತಿದಿನ ಎರಡು ಬಾರಿ ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಾರೆ. ಅಲ್ಲದೆ ಕುಡಿಯುವ ನೀರಿಗಾಗಿ ಅಲ್ಲಲ್ಲಿ ತೊಟ್ಟಿಗಳ ವ್ಯವಸ್ಥೆ ಮಾಡಿದ್ದಾರೆ. ‘ಜಾನುವಾರುಗಳಿಂದ ಪ್ರತಿ ತಿಂಗಳು 20ಕ್ಕೂ ಅಧಿಕ ಟ್ರಾಲಿಗಳಷ್ಟು ಸಗಣಿ ಗೊಬ್ಬರ ದೊರೆಯುತ್ತಿದೆ. ಅದನ್ನು ನನ್ನ ತೋಟಕ್ಕೆ ಪೂರ್ಣವಾಗಿ ಬಳಸಿಕೊಳ್ಳುತ್ತಿದ್ದೇನೆ. ಮೇಕೆ ಮತ್ತು ಕೋಳಿಗಳಿಂದಲೂ ಉತ್ತಮ ಆದಾಯ ಸಿಗುತ್ತಿದೆ’ ಎಂದು ಬಸವಣ್ಣಿ ಹೇಳಿದರು. ಅವರ ಸಂಪರ್ಕ ಸಂಖ್ಯೆ: ಮೊ.ಸಂ.9448859526.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.