ಬೆಳಗಾವಿ: ಕುಂಬಾರರಿಗೆ ಹಿಂದುಳಿದ ವರ್ಗ 2ಎ ಜಾತಿ ಪ್ರಮಾಣಪತ್ರ ನೀಡಬೇಕು. ಕುಂಬಾರರ ಮಕ್ಕಳ ಶಾಲಾ ದಾಖಲಾತಿಯಲ್ಲಿ ಹಿಂದೂ ಕುಂಬಾರ ಎಂದು ನಮೂದಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುಂಬಾರರ ಸಂಘ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
‘ಕುಂಬಾರರಾದ ನಾವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಮಡಿಕೆ ಹಾಗೂ ಕುಡಿಕೆಗಳ ಮಾರುಕಟ್ಟೆಗಾಗಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅವಕಾಶವಿಲ್ಲದೆ, ನಮ್ಮ ಜೀವನಮಟ್ಟ ಕೆಳಮಟ್ಟದಲ್ಲಿದೆ. ಹೀಗಾಗಿ, ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರಿ ನೌಕರಿ ಪಡೆದರೂ ಸಿಂಧುತ್ವದ ಬಗ್ಗೆ ಇರುವ ತೊಂದರೆಗಳನ್ನು ನಿವಾರಿಸಬೇಕು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಕುಂಬಾರರಿಗೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ನಿರುದ್ಯೋಗಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಕೊಡಿಸಬೇಕು. ಎಲ್ಲ ಜಿಲ್ಲೆಗಳಲ್ಲೂ ಕುಂಬಾರರ ಸಮುದಾಯ ಭವನ ನಿರ್ಮಿಸಬೇಕು. ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.
‘ಕುಂಬಾರಿಕೆ ಮಾಡುವ ಕಸಬುದಾರರಿಗೆ, ಮಣ್ಣು ಪಡೆಯುವುದಕ್ಕಾಗಿ 2 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಬಿ.ಜಿ. ಕುಂಬಾರ, ಐ.ಎಸ್. ಕುಂಬಾರ, ಶಿವಾನಂದ ಕುಂಬಾರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.