ADVERTISEMENT

ಸ್ಥಾಪನೆಯಾಗಿ 7 ವರ್ಷಗಳಾದರೂ ಬಾರದ ಅನುದಾನ: ಹೆಸರಿಗಷ್ಟೇ ಚನ್ನಮ್ಮ ಅಧ್ಯಯನ ಪೀಠ

ಇಮಾಮ್‌ಹುಸೇನ್‌ ಗೂಡುನವರ
Published 17 ಅಕ್ಟೋಬರ್ 2024, 5:04 IST
Last Updated 17 ಅಕ್ಟೋಬರ್ 2024, 5:04 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದಲ್ಲಿ ರಾಜ್ಯ ಸರ್ಕಾರ 2017ರಲ್ಲಿ ಸ್ಥಾಪಿಸಿದ್ದ ರಾಣಿ ಚನ್ನಮ್ಮ ಅಧ್ಯಯನ ಪೀಠವು ‘ಕೊರತೆ’ಗಳ ಮಡಿಲಲ್ಲಿ ಸಿಕ್ಕು ನರಳುತ್ತಿದೆ.

ಸ್ಥಾಪನೆಯಾಗಿ ಏಳು ವರ್ಷಗಳಾದರೂ ಇದಕ್ಕೆ ಬಿಡಿಗಾಸು ಅನುದಾನ ಬಂದಿಲ್ಲ. ಪ್ರತ್ಯೇಕವಾದ ಕಟ್ಟಡವಿಲ್ಲ. ಸಿಬ್ಬಂದಿ ಇಲ್ಲ. ಹಾಗಾಗಿ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ ಒಂದಿಷ್ಟು ಕಾರ್ಯಚಟುವಟಿಕೆ ಕೈಗೊಂಡು, ಆಮೆಗತಿಯಲ್ಲಿ ಸಾಗುತ್ತಿದೆ.

ಸಂಶೋಧನೆಯಿಂದ ದೂರ:

1824ರಲ್ಲಿ ಆಂಗ್ಲರ ವಿರುದ್ಧ ಹೋರಾಡಿ, ವಿಜಯ ಸಾಧಿಸಿದ್ದು ಕಿತ್ತೂರು ಸಂಸ್ಥಾನ. ಜಿಲ್ಲೆಯ ಹಲವೆಡೆ ಕಿತ್ತೂರು ಸಂಸ್ಥಾನದ ಕುರುಹುಗಳಿವೆ. ಆರ್‌ಸಿಯುದಲ್ಲಿ ಸ್ಥಾಪನೆಯಾದ ಈ ಪೀಠದ ಮೂಲಕ ಕಿತ್ತೂರು ಸಂಸ್ಥಾನದ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಬಹುದು. ಜನರಿಗೆ ಗೊತ್ತಿರದ ಎಷ್ಟೋ ವಿಷಯ ಬೆಳಕಿಗೆ ತರಬಹುದು ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಅನುದಾನ ಕೊರತೆಯಿಂದ ಸಂಶೋಧನೆಯಿಂದಲೇ ಪೀಠ ದೂರ ಉಳಿದಿರುವುದು ಇತಿಹಾಸಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

‘ಹೆಸರಿಗಷ್ಟೇ ಚನ್ನಮ್ಮ ಅಧ್ಯಯನ ಪೀಠವಿದೆ. ಇಲ್ಲಿ ಸಂಶೋಧನೆ, ಅಧ್ಯಯನ ಸೇರಿ ಯಾವ ಚಟುವಟಿಕೆಯೂ ಶಿಸ್ತುಬದ್ಧವಾಗಿ ನಡೆಯುತ್ತಿಲ್ಲ’ ಎನ್ನುವ ಆರೋಪ ಕೇಳಿಬರುತ್ತಿದೆ.

ವಿವಿಧ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ:

‘ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಪ್ರಯುಕ್ತ ನಾವು ವಿವಿಧ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಆಯ್ದ ಪದವಿ ಕಾಲೇಜುಗಳಲ್ಲಿ ‘ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಕಾರ್ಯಕ್ರಮವನ್ನು ಅ.23ರಂದು ಆಯೋಜಿಸಿದ್ದೇವೆ. ‘ನಾನು ಚನ್ನಮ್ಮ. ನಾನೂ ಚನ್ನಮ್ಮ’ ಎಂಬ ಕೃತಿಯನ್ನೂ ಹೊರತರುತ್ತಿದ್ದೇವೆ. ವಿ.ವಿಯ ಆಂತರಿಕ ಸಂಪನ್ಮೂಲದಿಂದ ಲಭ್ಯವಾಗುವ ಹಣದಲ್ಲೇ ನಾನಾ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ’ ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಆರ್‌ಸಿಯುನ ಹೊಸ ಕ್ಯಾಂಪಸ್‌ ನಿರ್ಮಾಣವಾಗುತ್ತಿದೆ. ಅಲ್ಲಿ ಚನ್ನಮ್ಮ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ಸೇರಿ ಎಲ್ಲ ಸೌಕರ್ಯ ಕಲ್ಪಿಸಲಾಗುವುದು. ಈಗ ಪೀಠಕ್ಕೆ ನಿರ್ದೇಶಕಿ, ಸಂಯೋಜಕರಿದ್ದಾರೆ. ಸಿಬ್ಬಂದಿ ನೇಮಕಕ್ಕೂ ಕ್ರಮ ವಹಿಸಲಾಗುವುದು’ ಎಂದರು.

‘ಚನ್ನಮ್ಮ ಅಧ್ಯಯನ ಪೀಠದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತೇವೆ. ಅಲ್ಲಿ ಮಂಡನೆಯಾಗುವ ಪ್ರಬಂಧಗಳ ವಿಷಯ ಬಳಸಿಕೊಂಡು, ಈವರೆಗೆ ಐದು ಕೃತಿಗಳನ್ನು ಪ್ರಕಟಿಸಿದ್ದೇವೆ.  ಇನ್ನೂ ಮೂರು ಕೃತಿಗಳು ಪ್ರಕಟಣೆಗೆ ಸಿದ್ಧವಾಗಿವೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕ್ರೋಢೀಕರಿಸಲು ಮತ್ತು ಸಂಶೋಧನೆ ಕೈಗೊಳ್ಳಲು ಯೋಜಿಸಲಾಗಿದೆ. ಸರ್ಕಾರದಿಂದ ಅನುದಾನ ಸಿಕ್ಕರೆ ಇವೆಲ್ಲ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ನಾಗರತ್ನಾ ಪರಾಂಡೆ.

‘ಇದೇ 23ರಿಂದ 25ರವರೆಗೆ ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಆಚರಿಸಲಾಗುತ್ತಿದೆ. ಆ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ ಮತ್ತು ಸಚಿವರು, ರಾಣಿ ಚನ್ನಮ್ಮ ಅಧ್ಯಯನ ಪೀಠಕ್ಕೆ ವಿಶೇಷ ಅನುದಾನ ಘೋಷಿಸಬೇಕು’ ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಚನ್ನಮ್ಮ ಅಧ್ಯಯನ ಪೀಠಕ್ಕೆ ಅನುದಾನ ಕೋರಿ ಹಿಂದೊಮ್ಮೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಈಗ ಮತ್ತೊಮ್ಮೆ ಸಲ್ಲಿಸುತ್ತೇವೆ
ಪ್ರೊ.ಸಿ.ಎಂ.ತ್ಯಾಗರಾಜ್‌ ಕುಲಪತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ವೀರರಾಣಿ ಚನ್ನಮ್ಮ ಹಾಗೂ ಕಿತ್ತೂರು ಸಂಸ್ಥಾನ ಕುರಿತಾಗಿ ಸಂಶೋಧನೆ, ಅಧ್ಯಯನಕ್ಕಾಗಿ ಸರ್ಕಾರ ಈ ಪೀಠಕ್ಕೆ ವಾರ್ಷಿಕ ₹25 ಲಕ್ಷ ಅನುದಾನ ಕೊಡಬೇಕು
ಯ.ರು.ಪಾಟೀಲ, ಸದಸ್ಯ, ರಾಣಿ ಚನ್ನಮ್ಮ ಅಧ್ಯಯನ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.