ರವಿಕುಮಾರ ಎಂ.ಹುಲಕುಂದ
ಬೈಲಹೊಂಗಲ: ತಾಲ್ಲೂಕಿನ ಬೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಯರಡಾಲ ಗ್ರಾಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗ್ರಾಮಸ್ಥರ ಗೋಳು ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ.
ಗ್ರಾಮದಲ್ಲಿ ಎರಡು ವಾರ್ಡ್‌ಗಳಿದ್ದು, ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. 1,500 ಮತದಾರರಿರುವ ಗ್ರಾಮದಲ್ಲಿ 400 ಮನೆಗಳಿವೆ. ಗ್ರಾಮದ ಜನರಿಗೆ ಬೇಕಾದ ಸರ್ಕಾರಿ ಪ್ರತಿ ಸೇವೆಗಳು 9 ಕಿ.ಮೀ.ಹತ್ತಿರದ ತಾಲ್ಲೂಕು ಕೇಂದ್ರ ಬೈಲಹೊಂಗಲಕ್ಕೆ ಬರಬೇಕಾಗಿದೆ.
ಮತಕ್ಷೇತ್ರ ಮಾತ್ರ ಚನ್ನಮ್ಮ ಕಿತ್ತೂರು ಆಗಿರುವುದರಿಂದ 30 ಕಿ.ಮೀ ಕ್ರಮಿಸಿ ಅಲ್ಲಿಯ ಸೇವೆಗಳನ್ನು ಪಡೆಯಬೇಕಾಗಿದೆ. ಸುಮಾರು 250 ಕಿ.ಮೀ. ಅಂತರದಲ್ಲಿರುವ ಕೆನರಾ ಲೋಕಸಭಾ ಮತಕ್ಷೇತ್ರ ಆಗಿರುವುದರಿಂದ ಗ್ರಾಮಕ್ಕೆ ಸಂಸದರ ನಿಧಿಗಳು ಅಪರೂಪ ಎನ್ನುವಂತಾಗಿದೆ. ಸಾಮಾನ್ಯ ಜನರು ಸಂಸದರ ಕಚೇರಿಗೆ ಹೋಗಲು ಹರಸಾಹಸ ಪಡಬೇಕಾಗಿದೆ. ಹೀಗಾಗಿ ಸಮೀಪದ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಒಳಪಡಿಸಬೇಕೆಂದು ಗ್ರಾಮಸ್ಥರ ಬಹುದಿನಗಳ ಕೂಗಾಗಿದೆ. ಆದರೆ, ಯಾರು ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಜಲಜೀವನ ಯೋಜನೆ ಹೆಸರಗಿಷ್ಟೆ: ನಿರಂತರ ನೀರು ಕೊಡುವ ಸರ್ಕಾರದ ಮಹತ್ವದ ಯೋಜನೆ ಜಲಜೀವನ ಕಾಮಗಾರಿ ಅಡಿಯಲ್ಲಿ ಗ್ರಾಮದ ಬಹು ಓಣಿಗಳನ್ನು ಅಗೆದು ಹಾಗೆಯೇ ಬಿಟ್ಟಿದ್ದರಿಂದ ಜನರು ನಿತ್ಯ ಹಲವಾರು ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಕಾರಣ ಯೋಜನೆ ಬೇಗ ಪೂರ್ಣಗೊಳ್ಳದಿರುವುದರಿಂದ ಗ್ರಾಮ ಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಗಳಿಗೆ ಮಳೆ ನೀರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಒಂದು ಕಿ.ಮೀ.ಹತ್ತಿರದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ನೀರು ತರಬೇಕಾಗಿದೆ. ಗ್ರಾಮದಲ್ಲಿನ ನೇಗಿನಹಾಳ ರಸ್ತೆಗೆ ಹೊಂದಿಕೊಂಡಿರುವ ಪರಿಶಿಷ್ಟ ಜಾತಿ ಸಮಾಜದವರ ಕೇರಿಯು ಮಳೆ ಬಂದಾಗ ಹೊಂಡದಂತಾಗಿ ಹಲವಾರು ಮನೆಗಳಿಗೆ ನೀರು ನುಗ್ಗುತ್ತಿದ್ದು, ಸಮಸ್ಯೆ ಬಗೆಹರಿಸಲು ತಾಪಂ, ಜಿಪಂಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ಹದಗೆಟ್ಟಿರುವ ರಸ್ತೆಗಳು: ‘ಗ್ರಾಮಕ್ಕೆ ಹೊಂದಿಕೊಂಡಿರುವ ಕನ್ನಡ ಪ್ರಾಥಮಿಕ ಶಾಲೆಯ ಪಕ್ಕದ ಮುಖ್ಯ ರಸ್ತೆಯು ತೀರಾ ಹದಗೆಟ್ಟಿದೆ. ಎಸ್ಟಿ ಜನಾಂಗದವರಿಗೆ ಸ್ಮಶಾನ ಭೂಮಿ ಇಲ್ಲದ ಕಾರಣ ಈ ರಸ್ತೆಯಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿರುವುದರಿಂದ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಬೈಲವಾಡ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಭೀಮಪ್ಪ ಕಮತಗಿ.
ಗ್ರಾಮದಿಂದ ದೇವಲಾಪೂರಕ್ಕೆ ಸಂಪರ್ಕಿಸುವ ರಸ್ತೆ ಎರಡು ಮತಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ತೀರಾ ಹದಗೆಟ್ಟಿದ್ದು ವಾರಸುದಾರರು ಇಲ್ಲವಾಗಿದೆ. ಗ್ರಾಮದ ಎಂ.ಕೆ.ಹುಬ್ಬಳ್ಳಿ ಕಡೆ ಹೋಗುವ ರಸ್ತೆಯೂ ಕೂಡ ಹಾಳಾಗಿದೆ. ಗ್ರಾಮದ ಬಸ್ ನಿಲ್ದಾಣ ಹತ್ತಿರದ ನೀರು ಸಂಗ್ರಹಿಸುವ ಜಲಕುಂಬ ಅನಾಥವಾಗಿದೆ. ಪ್ರತಿನಿತ್ಯ ಕೊಡ ಹಿಡಿದುಕೊಂಡು ದಿನವಿಡಿ ಕುಡಿಯುವ ನೀರು ಸಂಗ್ರಹಿಸುವುದೇ ಗ್ರಾಮಸ್ಥರ ಕಾಯಕವಾಗಿದೆ ಎನ್ನುತ್ತಾರೆ ಗ್ರಾಮಸ್ಥ ಶ್ರೀಶೈಲ ರಾಜಗೋಳಿ.
ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ: ಎಂ.ಕೆ.ಹುಬ್ಬಳ್ಳಿ ಮಾರ್ಗದಿಂದ ಬರುವ ಹಂತದ ಕೊನೆ ಹಳ್ಳಿ ಯರಡಾಲ ಗ್ರಾಮವಾಗಿದ್ದು, ಶಕ್ತಿ ಯೋಜನೆಯ ಪ್ರಭಾವದಿಂದ ಎಲ್ಲ ಬಸ್ಸುಗಳು ತುಂಬಿಕೊಂಡು ಬರುವುದರಿಂದ ಬಸ್ ಚಾಲಕರು ಬಸ್ ನಿಲ್ಲಿಸದೆ ಹೋಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ, ನೌಕರರಿಗೆ, ವೃದ್ಧರು ಸಮಸ್ಯೆ ಅನುಭವಿಸುವಂತಾಗಿದೆ. ಇದರಿಂದ ಖಾಸಗಿ ವಾಹನಗಳನ್ನು ಅವಲಂಭಿಸಿ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಭಾರತಿ ಗೋಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.