ಬೆಳಗಾವಿ: ನಗರದ ಮಗ್ಗುಲಲ್ಲೇ ಇರುವ ಹಿಂಡಲಗಾ ಗ್ರಾಮ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಬೆಳಗಾವಿ ಮಹಾನಗರಕ್ಕೆ ಸರಿಸಮಾನಾಗಿ ಬೆಳೆಯಬೇಕಿದ್ದ ಊರು ಅಭಿವೃದ್ಧಿಯಿಂದ ದೂರವುಳಿದಿದೆ.
‘ನಮ್ಮೂರಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ನಿರ್ವಹಣೆ ಕಾಣದ ಚರಂಡಿಗಳಿಂದ ಕೊಳಚೆ ನೀರು ಬಾವಿಗಳಿಗೆ ಸೇರುತ್ತಿದೆ. ರಸ್ತೆಬದಿ ಸಂಗ್ರಹವಾಗುತ್ತಿರುವ ಮಳೆನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಇಡೀ ಊರಲ್ಲಿ ಶುಚಿತ್ವ ಇಲ್ಲದ್ದರಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಕಾಡುತ್ತಿದೆ’ ಎಂದು ಗ್ರಾಮಸ್ಥ ಸಂದೀಪ ಮೋರೆ ‘ಪ್ರಜಾವಾಣಿ’ ಮಂದೆ ಅವಲತ್ತುಕೊಂಡರು.
‘ಕೆಲವು ಮಾರ್ಗಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಉಳಿದೆಡೆ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೂ ತೊಂದರೆಯಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.
ಆರಂಭವಾಗದ ಕಾಮಗಾರಿ: ‘ಜಲಜೀವನ ಮಿಷನ್ ಯೋಜನೆಯಡಿ ಅನುದಾನ ಮಂಜೂರಾಗಿದೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಈ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸಿದರೆ, ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ. ಹಾಳಾಗಿರುವ ಚರಂಡಿಗಳನ್ನು ಹೊಸದಾಗಿ ಕಟ್ಟಬೇಕಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರಾಮಚಂದ್ರ ಕುದ್ರೇಮನಿಕರ ಹೇಳಿದರು.
‘ರಾಯಚೂರು–ಬಾಚಿ ರಾಜ್ಯ ಹೆದ್ದಾರಿ ನಮ್ಮೂರಲ್ಲಿ ಹಾಯ್ದುಹೋಗಿದೆ. ಇದು ಕರ್ನಾಟಕದಿಂದ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಹೆದ್ದಾರಿ ಇಕ್ಕಟ್ಟಿನಿಂದ ಕೂಡಿದೆ. ಆಗಾಗ ಅಪಘಾತ ಸಂಭವಿಸುತ್ತಲೇ ಇವೆ. ಹಾಗಾಗಿ ಹಿಂಡಲಗಾದ ಗಣೇಶ ದೇವಸ್ಥಾನದಿಂದ ಬಾಚಿಯವರೆಗೆ ಅದನ್ನು ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.
‘ನಮ್ಮಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಸ್ಮಶಾನಭೂಮಿಯೂ ಸುಸ್ಥಿತಿಯಲ್ಲಿಲ್ಲ. ನಗರಕ್ಕೆ ಹೊಂದಿಕೊಂಡ ಗ್ರಾಮ ನಿರೀಕ್ಷೆಯಂತೆ ಅಭಿವೃದ್ಧಿಯಾಗುತ್ತಿಲ್ಲ’ ಎಂದು ಮತ್ತೊಬ್ಬ ಸದಸ್ಯ ಡಿ.ಬಿ.ಪಾಟೀಲ ಆರೋಪಿಸಿದರು.
‘ಬೆಳಗಾವಿ ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲಿ ಇದು ಒಂದೂ. ಇಲ್ಲಿ 14 ವಾರ್ಡ್‌ಗಳಿವೆ. ಆದರೆ ನಮ್ಮ ಸಮಸ್ಯೆಗಳನ್ನು ಆಲಿಸಲು ಹಿಂಡಲಗಾ ಗ್ರಾಮ ಪಂಚಾಯ್ತಿಯಲ್ಲಿ ಪೂರ್ಣಕಾಲಿಕ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೇ(ಪಿಡಿಒ) ಇಲ್ಲ. ಬೇರೆ ಗ್ರಾಮ ಪಂಚಾಯ್ತಿ ಅಧಿಕಾರಿಗೆ ಇಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅವರು ನಿಯಮಿತವಾಗಿ ಇಲ್ಲಿಗೆ ಬಾರದ್ದರಿಂದ ನಾವು ಯಾವುದಾದರೂ ಸಮಸ್ಯೆ ಹೊತ್ತು ಕಚೇರಿಗೆ ಹೋದರೆ ಆಲಿಸುವವರೇ ಇಲ್ಲದಂತಾಗಿದೆ’ ಎಂಬುದು ಜನರ ಆರೋಪ.
ಪೂರ್ಣಕಾಲಿಕ ಪಿಡಿಒ ಇಲ್ಲದ್ದರಿಂದ ಹಿಂಡಲಗಾ ಗ್ರಾಮ ಪಂಚಾಯ್ತಿಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಪೂರ್ಣಕಾಲಿಕ ಪಿಡಿಒ ನೇಮಕಕ್ಕಾಗಿ ಸರ್ಕಾರ ಕ್ರಮ ವಹಿಸಬೇಕು-ಡಿ.ಬಿ.ಪಾಟೀಲ, ಸದಸ್ಯ ಹಿಂಡಲಗಾ ಗ್ರಾಮ ಪಂಚಾಯ್ತಿ
ಹಿಂಡಲಗಾ ಗ್ರಾಮಸ್ಥರಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತೇನೆ-ಎಸ್.ಕೆ.ಪಾಟೀಲ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬೆಳಗಾವಿ ತಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.