ಚನ್ನಮ್ಮನ ಕಿತ್ತೂರು: ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಾಡಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ‘ವೀರಭದ್ರ ಕೂಗು’ ಹೊಡೆದು, ಗೆದ್ದ ಕಿತ್ತೂರಿನ ವಿಜಯೋತ್ಸವಕ್ಕೆ ಈಗ ದ್ವಿಶತಮಾನೋತ್ಸವದ ಸಂಭ್ರಮ.
ಹಿಂದಿನ ಬಿಜೆಪಿ ಸರ್ಕಾರವು ಏಳು ಜಿಲ್ಲೆಗಳನ್ನು ಒಳಗೊಂಡಿದ್ದ ಬೆಳಗಾವಿ ವಿಭಾಗಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣ ಮಾಡಿತು. ಈಗ ಮತ್ತೊಂದು ಹೆಜ್ಜೆ ಮುಂದೆ ಇರಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಕಿತ್ತೂರು’ ತಾಲ್ಲೂಕನ್ನು ‘ಚನ್ನಮ್ಮನ ಕಿತ್ತೂರು’ ತಾಲ್ಲೂಕು ಎಂದು ಈಚೆಗೆ ಅಧಿಕೃತವಾಗಿ ಘೋಷಿಸಿದೆ. ಇವೆಲ್ಲ ಪ್ರಕ್ರಿಯೆಯಿಂದ ನಾಡಿನ ಕಿರೀಟಕ್ಕೆ ಮತ್ತೆರಡು ಗರಿ ತೊಡಿಸಿದಂತಾಗಿದೆ. ಆದರೆ, ‘ಹೆಸರಷ್ಟೇ ಬದಲಾದರೆ ಸಾಲದು. ಊರಿನ ಚಿತ್ರಣವೂ ಬದಲಾಗಲಿ’ ಎಂಬುದು ಜನರ ಬಯಕೆ.
ಐತಿಹಾಸಿಕ ಮಹತ್ವವುಳ್ಳ ಊರುಗಳಿಗೆ ಮಹಾನ್ ರಾಷ್ಟ್ರಪುರುಷರು ಮತ್ತು ಮಹಿಳೆಯರ ಹೆಸರು ನಾಮಕರಣ ಮಾಡಬೇಕು ಎಂಬ ಕೂಗು ದಶಕದ ಹಿಂದೆಯೇ ಎದ್ದಿದ್ದು ಕ್ರಾಂತಿಯ ನೆಲ ಕಿತ್ತೂರಿನಿಂದಲೇ. ಕಿತ್ತೂರಿಗೆ ಚನ್ನಮ್ಮನ ಕಿತ್ತೂರು, ಬೆಳವಡಿಗೆ ಮಲ್ಲಮ್ಮನ ಬೆಳವಡಿ, ಸಂಗೊಳ್ಳಿಗೆ ರಾಯಣ್ಣನ ಸಂಗೊಳ್ಳಿ, ಅಮಟೂರಿಗೆ ಬಾಳಪ್ಪನ ಅಮಟೂರು... ಹೀಗೆ ನಾಮಕರಣ ಮಾಡಬೇಕು. ಇದರಿಂದ ಐತಿಹಾಸಿಕ ಪುರುಷರ ಊರಿಗೆ ಹೆಚ್ಚಿನ ಗೌರವ ಸಿಕ್ಕಂತಾಗುತ್ತದೆ. ಇದಕ್ಕೇನು ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕಾಗಿಲ್ಲ ಎಂಬುದು ಅನೇಕರ ವಾದವಾಗಿತ್ತು. ಆದರೆ, ಹಿಂದಿದ್ದ ಯಾವ ಸರ್ಕಾರಗಳೂ ಈ ಕೂಗಿಗೆ ಸ್ಪಂದಿಸಿರಲಿಲ್ಲ. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರ ‘ಚನ್ನಮ್ಮನ ಕಿತ್ತೂರು’ ಎಂದು ಅಧಿಕೃತವಾಗಿ ಸರ್ಕಾರಿ ಮುದ್ರೆ ಒತ್ತಿರುವುದು ನಾಡಿನ ಜನರ ಸಂಭ್ರಮಕ್ಕೆ ಕಾರಣವಾಗಿದೆ.
ಹೆಸರಷ್ಟೇ ಸಾಲದು: ‘ಕಿತ್ತೂರು ತಾಲ್ಲೂಕಿಗೆ ‘ಚನ್ನಮ್ಮನ ಕಿತ್ತೂರು’ ಎಂದು ನಾಮಕರಣ ಮಾಡಿದರಷ್ಟೇ ಸಾಲದು. ರಾಣಿ ಚನ್ನಮ್ಮನಿಗೆ ರಾಷ್ಟ್ರೀಯ ಮನ್ನಣೆ ಸಿಗಬೇಕು. ಕಾಕತಿಯ ಜನ್ಮಭೂಮಿ, ಕಿತ್ತೂರಿನ ಕರ್ಮಭೂಮಿ ಮತ್ತು ಬೈಲಹೊಂಗಲದ ಲಿಂಗೈಕ್ಯ ತಾಣಗಳು ಅಭಿವೃದ್ಧಿ ಕಾಣಬೇಕು. ಚನ್ನಮ್ಮನ ಜತೆಯಾಗಿ ಹೋರಾಡಿದ ಹಲವಾರು ವೀರರ ತಾಣಗಳೂ ಪ್ರಗತಿಯತ್ತ ದಾಪುಗಾಲು ಹಾಕಬೇಕು. ಆಕರ್ಷಕ ಪ್ರವಾಸಿ ತಾಣವಾಗಿ ಅವುಗಳನ್ನು ರೂಪಿಸಬೇಕು. ಸರ್ಕಾರವೂ ಗಮನ ನೀಡಿ ಅಭಿವೃದ್ಧಿ ಯೋಜನೆ ರೂಪಿಸಬೇಕು. ಚರಿತ್ರಾರ್ಹ ವ್ಯಕ್ತಿಗಳ ತಾಣಗಳಲ್ಲಿಯೂ ಪ್ರವಾಸೋದ್ಯಮ ಬೆಳೆಸಬಹುದಾಗಿದೆ ಎಂದು ತೋರಿಸಿಕೊಡಬೇಕು’ ಎಂಬುದು ನಾಗರಿಕರ ಹಕ್ಕೊತ್ತಾಯ.
ಅಂದಿನ ಮಾಸ್ಟರ್ ಪ್ಲಾನ್ ಜಾರಿಗೆ ತನ್ನಿ: 1992ರಲ್ಲಿ ಅಂದಿನ ಬಂಗಾರಪ್ಪ ನೇತೃತ್ವದ ಸರ್ಕಾರ ರಾಣಿ ಚನ್ನಮ್ಮನ ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿತ್ತು. ಸುಮಾರು ₹6 ಕೋಟಿ ಅನುದಾನವನ್ನೂ ಘೋಷಿಸಿತ್ತು. ಈ ಯೋಜನೆಯ ಹಿಂದೆ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಲ್ಲಾರಿಗೌಡ್ರ ಪಾಟೀಲ ಅವರ ಆಸಕ್ತಿಯೂ ಎದ್ದು ಕಂಡಿತ್ತು.
ರಾಷ್ಟ್ರೀಯ ಹೆದ್ದಾರಿಯ ಈಗಿನ ಚನ್ನಮ್ಮ ವರ್ತುಲದಿಂದ ಅರಳಿಕಟ್ಟಿ, ಸೋಮವಾರ ಪೇಟೆ, ಡೊಂಬರಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿವರೆಗೆ ದ್ವಿಪಥ ರಸ್ತೆ ನಿರ್ಮಾಣ, ಕೋಟೆಯೊಳಗೆ ರಿಂಗ್ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಕೋಟೆಯ ಒಳಾವರಣ ಮತ್ತು ಹೊರಾವರಣದ ಸುತ್ತಲೂ ಬೆಳಕಿನ ವ್ಯವಸ್ಥೆ ಕೈಗೊಳ್ಳುವುದು ಈ ಯೋಜನೆ ಉದ್ದೇಶವಾಗಿತ್ತು.
‘ಭರದಿಂದ ಪ್ರಾರಂಭವಾದ ಕಾಮಗಾರಿ ರಾಷ್ಟ್ರೀಯ ಹೆದ್ದಾರಿಯಿಂದ ಅರಳಿಕಟ್ಟಿವರೆಗೆ ಬಂದು ನಿಂತಿತು. ಈ ನಡುವೆ ಅಧಿಕಾರಿಗಳು ಮತ್ತು ಇಲ್ಲಿಯ ನಾಗರಿಕರ ಮಧ್ಯೆದ ಸಮನ್ವಯದ ಕಂದಕದಿಂದಾಗಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಕೋಟೆ ಒಳಾವರಣದಲ್ಲಿ ರಿಂಗ್ ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಯಿತು. ಸೋಮವಾರ ಪೇಟೆ, ಡೊಂಬರಕೊಪ್ಪವರೆಗಿನ ರಸ್ತೆ ವಿಸ್ತರಣೆ ನನೆಗುದಿಗೆ ಬಿತ್ತು. ಸುಮಾರು ಎರಡೂವರೆ ವರ್ಷ ಆಡಳಿತ ನಡೆಸಿದ ನಂತರ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅಧಿಕಾರದಿಂದ ಕೆಳಗಿಳಿದರು. ಅವರು ರೂಪಿಸಿದ್ದ ಮಾಸ್ಟರ್ ಪ್ಲಾನ್ ಅವರೊಂದಿಗೇ ಹೊರಟು ಹೋಯಿತು. ಅವರು ರೂಪಿಸಿದ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಗಬೇಕಿದೆ’ ಎನ್ನುತ್ತಾರೆ ಸ್ಥಳೀಯರು.
‘ಬಂಗಾರಪ್ಪ ಸರ್ಕಾರ ಹೋದ ನಂತರ ಅನೇಕ ಸರ್ಕಾರಗಳು ಬಂದು ಹೋಗಿವೆ. ಸ್ಥಳೀಯರಾದ ಸುರೇಶ ಮಾರಿಹಾಳ ಶಾಸಕರಾದ ನಂತರ ಕಿತ್ತೂರು ಉತ್ಸವಕ್ಕೆ ಅದ್ಧೂರಿತನ ಬಂತು. ಹಿಂದಿನ ಶಾಸಕರಾಗಿದ್ದ ಡಿ. ಬಿ. ಇನಾಮದಾರ, ಮಹಾಂತೇಶ ದೊಡ್ಡಗೌಡರ ಅವಧಿಯಲ್ಲಿ ಕೆಲವು ಕೆಲಸಗಳಾದವು. ಶಾಸಕ ಬಾಬಾಸಾಹೇಬ ಪಾಟೀಲ ಅವರೂ ಕಿತ್ತೂರಿನ ಅಂದ ಹೆಚ್ಚಿಸಿ ಪ್ರವಾಸಿ ತಾಣವಾಗಿ ರೂಪಿಸುವ ಇಚ್ಛೆ ತೋರ್ಪಡಿಸಿದ್ದಾರೆ. ಸರ್ಕಾರ ಆಸಕ್ತಿ ತೋರಿ ಅನುದಾನ ನೀಡಬೇಕಿದೆ’ ಎಂದು ಇಲ್ಲಿನವರು ಬಯಸುತ್ತಾರೆ.
ಕಿತ್ತೂರು ಕರ್ನಾಟಕ ಚನ್ನಮ್ಮನ ಕಿತ್ತೂರು ಎಂದು ಕೇವಲ ಹೆಸರು ಬದಲಾವಣೆ ಮಾತ್ರ ಆಗಿದೆ. ಅಭಿವೃದ್ಧಿ ಮಾತ್ರ ನಿರೀಕ್ಷೆಯಂತೆ ಆಗಿಲ್ಲ. ತಾಲ್ಲೂಕು ಆಗಿದ್ದರೂ ಪೂರ್ಣಪ್ರಮಾಣದ ಕಚೇರಿಗಳು ಇನ್ನೂ ಬಂದಿಲ್ಲ. ಚನ್ನಮ್ಮನ ವಿಜಯೋತ್ಸವ 200ನೇ ವರ್ಷಕ್ಕೆ ಕಾಲಿಟ್ಟದ್ದರೂ ಯಾವುದೇ ಚಟುವಟಿಕೆ ನಡೆದಿಲ್ಲ-ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ ಚನ್ನಮ್ಮನ ಕಿತ್ತೂರು
ಇತಿಹಾಸದ ಹಿನ್ನೆಲೆಯುಳ್ಳ ಕಿತ್ತೂರು ಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪಿಸುವ ಪ್ರಯತ್ನ ಸಾಗಿದೆ. ಕೆಲವು ಕಾಮಗಾರಿಗಳಿಗೆ ಸರ್ಕಾರದ ಅನುದಾನ ಬಿಡುಗಡೆ ಆಗಿದೆ. ಟೆಂಡರ್ ಪ್ರಕ್ರಿಯೆ ಬಾಕಿಯಿದೆ–ಬಾಬಾಸಾಹೇಬ ಪಾಟೀಲ ಶಾಸಕ
ಸಂಗೊಳ್ಳಿ ಬಳಿ ಇರುವ ಮಲಪ್ರಭಾ ನದಿಗೆ ಸಂಪರ್ಕ ಸೇತುವೆ ನಿರ್ಮಾಣ ಮಾಡಿ ಬಾಳಪ್ಪನ ಅಮಟೂರಿಗೆ ಮತ್ತು ಬೈಲಹೊಂಗಲದಲ್ಲಿರುವ ರಾಣಿ ಚನ್ನಮ್ಮನ ಸಮಾಧಿ ತಾಣದ ಅಂತರ ತಗ್ಗಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಸರ್ಕಾರ ಇದನ್ನು ಈಡೇರಿಸಬೇಕು–ಚಂದ್ರಗೌಡ ಪಾಟೀಲ, ಸಮಾಜ ಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.