ADVERTISEMENT

ಚಿಕ್ಕೋಡಿ | ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ

ಪ್ರಜಾವಾಣಿ ವಿಶೇಷ
Published 19 ನವೆಂಬರ್ 2024, 4:53 IST
Last Updated 19 ನವೆಂಬರ್ 2024, 4:53 IST
ಆಸನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೆಟ್ಟಿಲುಗಳ ಮೇಲೆ ಜನರು ಕುಳಿತಿರುವುದು
ಆಸನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೆಟ್ಟಿಲುಗಳ ಮೇಲೆ ಜನರು ಕುಳಿತಿರುವುದು   

ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.

100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್‌ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ನಿಯೋಜಿಸಿದ್ದ ಕೆಲವು ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ನಿಯೋಜಿಸಿದೆ. ಇದರಿಂದ ಆಸ್ಪತ್ರೆಯಲ್ಲಿ ತಮಗೆ ಸಮರ್ಪಕವಾಗಿ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಈ ಆಸ್ಪತ್ರೆ ಕಾರ್ಯಾರಂಭ ಮಾಡಿದ ವೇಳೆ, 14 ಶುಶ್ರೂಷಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ಪೈಕಿ ನಾಲ್ವರು ಧೀರ್ಘಾವಧಿಗೆ ರಜೆ ಪಡೆದಿದ್ದಾರೆ. ತಲಾ ಒಬ್ಬರು ಸ್ತ್ರೀರೋಗ ತಜ್ಞೆ, ಅರಿವಳಿಕೆ ತಜ್ಞ ಮಾತ್ರ ಸೇವೆಯಲ್ಲಿರುವ ಕಾರಣ, ರೋಗಿಗಳಿಗೆ ತೊಂದರೆಯಾಗುತ್ತಿದೆ.

ADVERTISEMENT

ನ.15ರಂದು ಹೆರಿಗೆಗಾಗಿ ಇಲ್ಲಿಗೆ ಬಂದಿದ್ದ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇನ್ನೂ ಚಿಕ್ಕೋಡಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ.

ಸಿಬ್ಬಂದಿ ಕೊರತೆ ನೀಗಿಸಬೇಕಿದೆ: ಆಸ್ಪತ್ರೆಗೆ ತಲಾ ಒಬ್ಬರು ಸ್ತ್ರೀರೋಗ ತಜ್ಞೆ, ಅರಿವಳಿಕೆ ತಜ್ಞ, ಚಿಕ್ಕಮಕ್ಕಳ ತಜ್ಞ ಬೇಕಿದ್ದಾರೆ. ತ್ವರಿತವಾಗಿ ಅವರನ್ನು ನೇಮಿಸಬೇಕಿದೆ. ಹೆಚ್ಚುವರಿಯಾಗಿ ನಾಲ್ವರು ‘ಡಿ’ ದರ್ಜೆ ನೌಕರರು, ಪ್ರಯೋಗಾಲಯ ತಂತ್ರಜ್ಞ ಸೇರಿದಂತೆ ವಿವಿಧ ಸಿಬ್ಬಂದಿ ನಿಯೋಜಿಸಬೇಕಿದೆ.

ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 14 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿಯೋಜನೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಕ್ರಾಮಿಕ ಕಾಯಿಲೆ ತಪಾಸಣೆ  ಕೇಂದ್ರವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸುವ ಅಗತ್ಯವಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ಈಗ ಒಂದು ಕೊಳವೆಬಾವಿ ಇದೆ. ಹೆಚ್ಚುವರಿಯಾಗಿ ಇನ್ನೊಂದು ಕೊಳವೆಬಾವಿ ಕೊರೆಯಿಸಬೇಕೆಂಬ ಒತ್ತಾಯ ಜನರದ್ದು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಇಚ್ಛಾಶಕ್ತಿಯಿಂದ ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ‘ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಮುಖ್ಯ ರಸ್ತೆಯಿಂದ ಆಸ್ಪತ್ರೆಗೆ ಸಂಪರ್ಕ ರಸ್ತೆ ನಿರ್ಮಿಸುತ್ತೇವೆ’ ಎಂದು ಹುಕ್ಕೇರಿ ಭರವಸೆ ನೀಡಿದ್ದರು. ಆದರೆ,  ಇನ್ನೂ ಕಾರ್ಯಗತವಾಗಿಲ್ಲ. ಪಟ್ಟಣದಿಂದ ಆಸ್ಪತ್ರೆಗೆ ಬರುವವರಿಗೆ ಬಸ್ ಸೌಕರ್ಯ ಇಲ್ಲ. ಸರಿಯಾದ ರಸ್ತೆ ಇಲ್ಲದ್ದರಿಂದ ಆಂಬುಲೆನ್ಸ್‌ ಕಡಿದಾದ ದಿಬ್ಬ ಏರಿ, ಆಸ್ಪತ್ರೆ ತಲುಪುವಂತಾಗಿದೆ.

ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಸಿಬ್ಬಂದಿ ನೇಮಿಸಬೇಕು. ಜತೆಗೆ ಮೂಲಸೌಕರ್ಯ ಕಲ್ಪಿಸಬೇಕು
-ಅಷ್ಫಾಕ್‌ ಸಯ್ಯದ್‌, ಸ್ಥಳೀಯ ಚಿಕ್ಕೋಡಿ
ನನ್ನ ಅಧಿಕಾರದ ವ್ಯಾಪ್ತಿಗೆ ಬರುವ ಸೌಲಭ್ಯಗಳನ್ನು ಆಸ್ಪತ್ರೆಗೆ ತ್ವರಿತವಾಗಿ ಒದಗಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಒದಗಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
-ಡಾ.ಸುಕುಮಾರ ಭಾಗಾಯಿ, ತಾಲ್ಲೂಕು ಆರೋಗ್ಯಾಧಿಕಾರಿ ಚಿಕ್ಕೋಡಿ
ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.