ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನಕ್ಕೆ ಸೇರಿದ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2011–12ರಲ್ಲಿ ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ’ ರಚಿಸಿದೆ. ಆದರೆ, ಅನುದಾನ ಕೊರತೆ, ಆಯುಕ್ತರ ಹುದ್ದೆಗೆ ಪ್ರತ್ಯೇಕ ಅಧಿಕಾರಿ ಇಲ್ಲದಿರುವುದು ಮತ್ತಿತರ ಕಾರಣದಿಂದ ಪ್ರಾಧಿಕಾರದ ಆಶಯವೇ ಈಡೇರುತ್ತಿಲ್ಲ.
‘ಕೆಲವು ಪ್ರಾಧಿಕಾರಗಳಿಗೆ ಸರ್ಕಾರ ಹೆಚ್ಚು ಅನುದಾನ ಕೊಡುತ್ತಿದೆ. ಆದರೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ’ ಎನ್ನುವ ಆರೋಪ ಜನರದ್ದು.
₹31.75 ಕೋಟಿ: 2011–12ರಲ್ಲಿ ರಚನೆಯಾದ ಕಿತ್ತೂರು ಪ್ರಾಧಿಕಾರಕ್ಕೆ ಕಳೆದ 13 ವರ್ಷಗಳಲ್ಲಿ ₹31.75 ಕೋಟಿ ಅನುದಾನ ಕೊಡಲಾಗಿದೆ.
2021–22, 2022–23ರಲ್ಲಿ ತಲಾ ₹10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, 2023–24ರಲ್ಲಿ ₹5 ಕೋಟಿಗೆ ಇಳಿಕೆಯಾಯಿತು. ಈ ಮೂರು ವರ್ಷಗಳನ್ನು ಬಿಟ್ಟರೆ, ಉಳಿದ ವರ್ಷಗಳಲ್ಲಿ ನಿರೀಕ್ಷಿತ ಅನುದಾನ ಬಂದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ 2019–20, 2020–21ರಲ್ಲಿ ಬಿಡಿಗಾಸು ಕೊಟ್ಟಿಲ್ಲ. ಮಾಸ್ಟರ್ ಪ್ಲ್ಯಾನ್ ರೂಪಿಸಬೇಕು ಎಂಬ ಬೇಡಿಕೆಯೂ ಈಡೇರಿಲ್ಲ.
‘2024–25ರಲ್ಲಿ ಪ್ರಾಧಿಕಾರಕ್ಕೆ ₹40 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ತಿಳಿಸಿದೆ. ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ’ ಎಂದು ಪ್ರಾಧಿಕಾರದ ಆಯುಕ್ತರೂ ಆಗಿರುವ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ‘ಪ್ರಜಾವಾಣಿ’ಗೆ ತಿಳಿಸಿದರು.
30 ಸ್ಥಳಗಳು: ಕಿತ್ತೂರು ಕೋಟೆ, ಗಡಾದಮರಡಿ, ಕಲ್ಮಠ, ಚೌಕಿಮಠ, ಪ್ರಾಚ್ಯವಸ್ತು ಸಂಗ್ರಹಾಲಯ,
ಬೈಲಹೊಂಗಲದಲ್ಲಿನ ರಾಣಿ ಚನ್ನಮ್ಮನ ಸಮಾಧಿ, ಬೆಳಗಾವಿ ತಾಲ್ಲೂಕಿನ ಕಾಕತಿ ಕೋಟೆ ಸೇರಿದಂತೆ 30 ಸ್ಥಳಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಿವೆ. ಈ ಸ್ಥಳಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ, ಕಿತ್ತೂರು ಉತ್ಸವ, ಸಾಹಿತ್ಯೋತ್ಸವ, ಕಲಾ ಪ್ರದರ್ಶನ, ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ವಾರ್ಷಿಕ ಜಾತ್ರೆಗಳನ್ನು ಸಂಘಟಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ.
₹500 ಕೋಟಿ ಕೊಡುವುದಾಗಿ ಪ್ರಕಟಿಸಿ: ‘ಅನುದಾನ ಕೊರತೆಯಿಂದ ಬಳಲುತ್ತಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಈ ಬಾರಿಯ ಉತ್ಸವದಲ್ಲಿ ₹500 ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಬೇಕು’ ಎಂದು ಕಿತ್ತೂರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೈಲಹೊಂಗಲ ಉಪವಿಭಾಗಾಧಿಕಾರಿಯೇ ಈಗ ಪ್ರಾಧಿಕಾರದ ಆಯುಕ್ತರಾಗಿದ್ದಾರೆ. ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಹಾಗಾಗಿ ಪ್ರಾಧಿಕಾರಕ್ಕೆ ಪ್ರತ್ಯೇಕ ಅಧಿಕಾರಿ ನೇಮಿಸಬೇಕು’ ಎಂಬುದು ಜನರ ಆಗ್ರಹ.
ಯಾವ ಉದ್ದೇಶಕ್ಕಾಗಿ ಪ್ರಾಧಿಕಾರ ರಚಿಸಲಾಗಿತ್ತೋ ಅದು ಈಡೇರುತ್ತಿಲ್ಲ. ಹೆಚ್ಚಿನ ಅನುದಾನ ಪೂರ್ಣಕಾಲಿಕ ಆಯುಕ್ತರ ನೇಮಕದ ಮೂಲಕ ಅದಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಿದೆ–ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಚನ್ನಮ್ಮನ ಕಿತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.