ಬೆಳಗಾವಿ: ಜಿಲ್ಲೆಯಲ್ಲಿ ಐದು ತಾಲ್ಲೂಕು ಹೊಸದಾಗಿ ರಚನೆಯಾಗಿವೆ. ಆದರೆ, ಅಲ್ಲಿ ಇಂದಿಗೂ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಗಿಲ್ಲ.
ಕ್ರೀಡಾಭ್ಯಾಸ ಮತ್ತು ಕ್ರೀಡಾಕೂಟಗಳ ಆಯೋಜನೆಗಾಗಿ ಕ್ರೀಡಾಪಟುಗಳು ಹಾಗೂ ಸಂಘಟಕರು ತೊಂದರೆ ಅನುಭವಿಸುವಂತಾಗಿದೆ. ಒಂದು ಖಾಸಗಿ ಮೈದಾನಗಳನ್ನೇ ಆಶ್ರಯಿಸಬೇಕು. ಇಲ್ಲದಿದ್ದರೆ ಹಳೆಯ ತಾಲ್ಲೂಕು ಕೇಂದ್ರಗಳತ್ತ ಮುಖಮಾಡಬೇಕು ಎನ್ನುವಂತಾಗಿದೆ.
ಅರ್ಧಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ 10 ತಾಲ್ಲೂಕುಗಳಿದ್ದವು. 2013ರಲ್ಲಿ 11ನೇ ತಾಲ್ಲೂಕು ಆಗಿ ಚನ್ನಮ್ಮನ ಕಿತ್ತೂರು ಘೋಷಣೆಯಾಯಿತು. 2017ರಲ್ಲಿ ಮೂಡಲಗಿ, ನಿಪ್ಪಾಣಿ, ಕಾಗವಾಡ ಮತ್ತು 2019ರಲ್ಲಿ ಯರಗಟ್ಟಿ ತಾಲ್ಲೂಕು ಘೋಷಣೆ ಮಾಡಲಾಯಿತು. ಆದರೆ, ಐದು ಕಡೆಗಳಲ್ಲೂ ಕ್ರೀಡಾಂಗಣ ತಲೆ ಎತ್ತಿಲ್ಲ.
ತಾಲ್ಲೂಕು ಕ್ರೀಡಾಂಗಣ ಸೌಲಭ್ಯ ಬೇಕು
ಚನ್ನಮ್ಮನ ಕಿತ್ತೂರು: ತಾಲ್ಲೂಕು ಕೇಂದ್ರದ ಸ್ಥಾನಮಾನ ಪಡೆದ ಚನ್ನಮ್ಮನ ಕಿತ್ತೂರು ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಆದರೆ, ಇದಕ್ಕೆ ಇನ್ನೂ ತಾಲ್ಲೂಕು ಕ್ರೀಡಾಂಗಣದ ಭಾಗ್ಯ ಸಿಕ್ಕಿಲ್ಲ.
ಪ್ರತಿವರ್ಷ ಕಿತ್ತೂರು ಉತ್ಸವದಲ್ಲಿ ಜಿಲ್ಲಾಡಳಿತದ ವತಿಯಿಂದ ಇಲ್ಲಿ ರಾಜ್ಯಮಟ್ಟದ ವಾಲಿಬಾಲ್, ಕಬಡ್ಡಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸಲ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಿತು. ಆದರೆ, ಇವೆಲ್ಲ ಸ್ಪರ್ಧೆಗಳ ಆಯೋಜನೆಗೆ ಗುರುಸಿದ್ಧೇಶ್ವರ ಪ್ರೌಢಶಾಲೆ ಆಟದ ಮೈದಾನವೇ ಆಸರೆ.
‘ಕಿತ್ತೂರು ಪಟ್ಟಣ ಬಳಿಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಸಮೀಪ ಇರುವ ಸರ್ಕಾರಿ ಜಾಗದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸುವ ಮಾತು ಕೇಳಿಬಂದಿದ್ದವು. ಇದಕ್ಕಾಗಿ ಜಾಗ ಗುರುತಿಸಲಾಗಿತ್ತು. ಆದರೆ, ಕ್ರೀಡಾಂಗಣ ನಿರ್ಮಾಣವಾಗಲಿಲ್ಲ. ಈಗಲಾದರೂ ಉದಯೋನ್ಮುಖ ಕ್ರೀಡಾಪಟುಗಳ ಅನುಕೂಲಕ್ಕಾಗಿ ಅದನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ತಾಲ್ಲೂಕಿನ ದಿಂಡಲಕೊಪ್ಪದ ಕಬಡ್ಡಿ ಪಟು ಭರಮ್ ಮಗದುಮ್.
ಮೂಡಲಗಿಯಲ್ಲಿಲ್ಲ ಕ್ರೀಡಾಂಗಣ
ಮೂಡಲಗಿ: ಮೂಡಲಗಿ ತಾಲ್ಲೂಕು ಕೇಂದ್ರವಾಗಿ ಏಳು ವರ್ಷವಾಯಿತು. ಇಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ಹೆಚ್ಚಿನ ಬೇಡಿಕೆಯಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಕ್ರೀಡಾಕೂಟ ಆಯೋಜಿಸಲು ಶಿಕ್ಷಣ ಇಲಾಖೆಯವರು ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನ ಅವಲಂಬಿಸಿದ್ದಾರೆ.
‘ಇಲ್ಲಿ ಕ್ರೀಡಾಂಗಣದ ಕೊರತೆಯಿದೆ. ಕ್ರೀಡಾಪಟುಗಳಿಗೆ ತರಬೇತಿ ನೀಡಲು ತರಬೇತುದಾರರು ಮತ್ತು ಕ್ರೀಡಾ ಅಧಿಕಾರಿ ನೇಮಿಸಬೇಕಿದೆ. ಕ್ರೀಡಾಂಗಣ ಇಲ್ಲದ ಕಾರಣ ಪಂದ್ಯಾವಳಿಗಳ ಆಯೋಜನೆಗೆ ಕಷ್ಟವಾಗುತ್ತಿದೆ’ ಎಂದು ಕ್ರಿಕೆಟ್ ಪಟು ಶಿವಾನಂದ ಗಾಡವಿ ‘ಪ್ರಜಾವಾಣಿ’ ಮುಂದೆ ಬೇಸರಿಸಿದರು.
ಕ್ರೀಡಾಪಟುಗಳಿಗೆ ಸಂಕಷ್ಟ
ನಿಪ್ಪಾಣಿ: ಬೆಳಗಾವಿ ಜಿಲ್ಲೆಯ ಎರಡನೇ ದೊಡ್ಡ ನಗರವಾದ ನಿಪ್ಪಾಣಿಯಲ್ಲಿ ತಾಲ್ಲೂಕು ಕ್ರೀಡಾಂಗಣ ಇಲ್ಲದ್ದರಿಂದ ಕ್ರೀಡಾಪಟುಗಳು ಪರದಾಡುವಂತಾಗಿದೆ. ‘ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಬೇಕು’ ಎನ್ನುವ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.
ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಶಾಸಕಿ ಶಶಿಕಲಾ ಜೊಲ್ಲೆ ಅವರು 10 ಎಕರೆ ಜಾಗ ಗುರುತಿಸಿ, ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಅನುಮೋದನೆ ಕೊಟ್ಟು, ತ್ವರಿತವಾಗಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂಬುದು ಕ್ರೀಡಾಪಟುಗಳ ಆಗ್ರಹ.
ಅನುದಾನ ಬಂದರೂ ಆರಂಭವಾಗದ ಕಾಮಗಾರಿ
ಕಾಗವಾಡ: ತಾಲ್ಲೂಕಿನ ಐನಾಪುರದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 10 ಎಕರೆ ಜಾಗ ನೀಡಲಾಗಿದೆ. ಸರ್ಕಾರದಿಂದ ₹1 ಕೋಟಿ ಅನುದಾನವೂ ಬಂದಿದೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ.
ಸರ್ಕಾರಿ ಕ್ರೀಡಾಂಗಣ ಇಲ್ಲದ್ದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಡಕಾಗುತ್ತಿದೆ. ಕಾಗವಾಡ, ಶೇಡಬಾಳ ಮತ್ತು ಐನಾಪುರದ ಖಾಸಗಿ ಮೈದಾನಗಳಲ್ಲೇ ಸರ್ಕಾರಿ ಕ್ರೀಡಾಕೂಟಗಳನ್ನು ಆಯೋಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಯರಗಟ್ಟಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅಲ್ಲಿನ ಸಂಘಟಕರು ಕ್ರೀಡಾಕೂಟಗಳ ಆಯೋಜನೆಗಾಗಿ ಬಸವೇಶ್ವರ ಪ್ರೌಢಶಾಲೆ ಮೈದಾನದ ಮೊರೆ ಹೋಗುವಂತಾಗಿದೆ. ಕ್ರೀಡಾಪಟುಗಳೂ ಅಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ.
(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ಸುನೀಲ ಗಿರಿ, ವಿಜಯ ಮಾಹಾಂತೇಶ ಅರಕೇರಿ, ಮಹಾಂತೇಶ ವಿರಕ್ತಮಠ)
ವಿಳಂಬವಾಗಿದ್ದು ಏಕೆ?
‘ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಿಸಲು ಕನಿಷ್ಠ ಎಂಟು ಎಕರೆ ಜಾಗ ಬೇಕು. ಅದರಲ್ಲಿ ವಿವಿಧ ಕ್ರೀಡೆಗಳ ಅಂಕಣ ನಿರ್ಮಿಸಬೇಕು. ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಬೇಕು. ಕ್ರೀಡಾಂಗಣದ ಜಾಗ ಪಟ್ಟಣದ ಹೃದಯಭಾಗದಲ್ಲಿ ಅಥವಾ ಪಟ್ಟಣಕ್ಕೆ ಹೊಂದಿಕೊಂಡಿರಬೇಕು. ಉತ್ತಮ ಸಾರಿಗೆ ಸೌಕರ್ಯ ಹೊಂದಿರಬೇಕು. ಇಂಥ ಜಾಗ ಸಿಗದ್ದರಿಂದ ಕ್ರೀಡಾಂಗಣ ಕಾಮಗಾರಿ ವಿಳಂಬವಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಹಿಂದೆ ನೀಡಿದ್ದ ನಿವೇಶನ ಸೂಕ್ತವಾಗಿರದ ಕಾರಣ ಬೇರೆ ನಿವೇಶನದ ಹುಡುಕಾಟ ನಡೆಸಲಾಗಿದೆ. ಶೀಘ್ರ ಒಂದು ಜಾಗ ಅಂತಿಮವಾಗಲಿದೆ- ಬಾಬಾಸಾಹೇಬ ಪಾಟೀಲ, ಶಾಸಕ ಚನ್ನಮ್ಮನ ಕಿತ್ತೂರು
ಜಾಗದ ಕೊರತೆಯಿಂದ ಹೊಸ ತಾಲ್ಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಈಗ ನಾಲ್ಕು ಕಡೆ ಜಾಗ ಸಿಕ್ಕಿದ್ದು ಕಾಮಗಾರಿ ಆರಂಭಿಸಲಾಗುವುದು-ಬಿ.ಶ್ರೀನಿವಾಸ, ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ
ಜಾಗದ ಕೊರತೆ ಇರುವುದರಿಂದ ಮೂಡಲಗಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ. ಅರಭಾವಿ ಭಾಗದಲ್ಲಿ ಸರ್ಕಾರಿ ಜಾಗಗಳಿವೆ. ಆದರೆ ಮೂಡಲಗಿ ಕೇಂದ್ರಸ್ಥಳದಿಂದ ಅವು ದೂರದಲ್ಲಿವೆ-ಶಿವಾನಂದ ಬಬಲಿ, ತಹಶೀಲ್ದಾರ್ ಮೂಡಲಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.