ಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ ಕ್ಷೀಣಿಸುವುದು ವಾಡಿಕೆ. ಆದರೆ ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಕರಂಜಾಳ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ನಿರ್ಮಿಸಿದ ಕೆರೆಯಲ್ಲಿ ಈ ವರ್ಷದ ಕಡು ಬೇಸಿಗೆಯಲ್ಲೂ ಅವಶ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.
ಕಳೆದ ವರ್ಷ ಉತ್ತಮ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಈ ವರ್ಷದ ಬೇಸಿಗೆಯಲ್ಲಿ ಸಾಕಷ್ಟು ನೀರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ವನ್ಯಜೀವಿಗಳ ದಾಹ ನೀಗಿಸುತ್ತಿರುವ ಕರಂಜಾಳ ಕೆರೆಯಲ್ಲಿ ಮುಂದಿನ ಒಂದೂವರೆ ತಿಂಗಳಿಗೆ ಆಗುವಷ್ಟು ನೀರಿನ ಸಂಗ್ರಹವಿದೆ.
ವನ್ಯಜೀವಿಗಳ ದಾಹ ನೀಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡ ಈ ವಿಶೇಷ ಕಾರ್ಯಕ್ಕೆ ಪರಿಸರವಾದಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ತಾಲ್ಲೂಕಿನ ಲೋಂಡಾ ಅರಣ್ಯದಲ್ಲಿ ಹುಲಿ, ಚಿರತೆ, ಕರಿಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಅಪರೂಪದ ಕಾನನವಾಸಿಗಳಿವೆ.
ಲೋಂಡಾ ಅರಣ್ಯದಲ್ಲಿ ಹೆರಿಯುವ ಪಾಂಡರಿ ನದಿ ಹಾಗೂ ಇತರೆ ಹಳ್ಳಕೊಳ್ಳಗಳಲ್ಲಿ ಈ ವನ್ಯಜೀವಿಗಳಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಸಾಕಾಗುವಷ್ಟು ಕುಡಿಯುವ ನೀರು ದೊರೆಯುತ್ತದೆ. ಆದರೆ ಬೇಸಿಗೆಯಲ್ಲಿ ಬಹುತೇಕ ಹಳ್ಳಕೊಳ್ಳಗಳು ಮತ್ತು ಜಲಮೂಲಗಳು ಬತ್ತುವ ಕಾರಣ ವನ್ಯಜೀವಿಗಳ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಎದುರಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಲೋಂಡಾ ವಲಯದ ಆಗಿನ ವಲಯ ಅರಣ್ಯ ಅಧಿಕಾರಿ ಎಸ್.ಎಸ್ ನಿಂಗಾಣಿ 2014-15ರಲ್ಲಿ ಕರಂಜಾಳ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಎತ್ತರದ ಬೆಟ್ಟಗುಡ್ಡಗಳ ಮಧ್ಯದ ಇಳಿಜಾರು ಪ್ರದೇಶದಲ್ಲಿ ಕೆರೆಯೊಂದನ್ನು ನಿರ್ಮಿಸಿದ್ದಾರೆ.
ಅರಣ್ಯ ಇಲಾಖೆಯ ಮೇಲಧಿಕಾರಿಗಳ ಸಹಕಾರದಿಂದ ಕೆರೆ ನಿರ್ಮಿಸಲು ಸಂಪನ್ಮೂಲ ಕ್ರೋಢೀಕರಿಸಿ ಈ ಕೆರೆಯನ್ನು ನಿರ್ಮಿಸಿದ್ದು, ಕೆರೆ ನಿರ್ಮಾಣವಾದಾಗಿನಿಂದ ಇವತ್ತಿನವರೆಗೂ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸವಿರುವ ಈ ವನ್ಯಜೀವಿಗಳ ದಾಹವನ್ನು ನೀಗಿಸುವ ಕಾರ್ಯವನ್ನು ಕರಂಜಾಳ ಕೆರೆ ಸದ್ದಿಲ್ಲದೇ ಮಾಡುತ್ತಿದೆ.
ನೀರಿನ ಸೆಲೆಗಳ ಸಂಪರ್ಕ ವ್ಯವಸ್ಥೆ
‘ದಟ್ಟ ಅರಣ್ಯದ ನಡುವೆ ಬೆಟ್ಟಗುಡ್ಡಗಳ ಅಡಿಯಲ್ಲಿ ರೂಪುಗೊಂಡಿರುವ ಕರಂಜಾಳ ಕೆರೆಯ ನೀರು ಸ್ವಚ್ಛ ಶುಭ್ರವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ. ಈ ಕೆರೆಗೆ ಹಲವು ನೀರಿನ ಸೆಲೆಗಳು ಸೇರಿವೆ. ಜೊತೆಗೆ ಕೆರೆಯ ಮೂರು ಭಾಗಗಳಲ್ಲಿ ಬೆಟ್ಟಗುಡ್ಡಗಳಿದ್ದು ಬೆಟ್ಟದಿಂದ ನೀರು ಹರಿದು ಬಂದು ಕೆರೆಯಲ್ಲಿ ಸೇರುವ ವ್ಯವಸ್ಥೆ ಕಲ್ಪಿಸಿದ್ದರಿಂದ ಕೆರೆಯಲ್ಲಿ ಯಾವಾಗಲೂ ನೀರಿನ ಸಂಗ್ರಹವಿರುತ್ತದೆ‘ ಎನ್ನುತ್ತಾರೆ ಹೊನ್ನಾವರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್ ನಿಂಗಾಣಿ.
ಎಲ್ಲೆಡೆ ಬರಗಾಲವಿದ್ದರೂ ಕರಂಜಾಳ ಕೆರೆಯಲ್ಲಿ ಈ ವರ್ಷ ನೀರಿನ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ಈ ವರ್ಷದ ಬೇಸಿಗೆಯಲ್ಲಿ ಲೋಂಡಾ ಕಾಡಿನಲ್ಲಿ ವಾಸಿಸುವ ಅಸಂಖ್ಯಾತ ವನ್ಯಜೀವಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿವೆ ಎಂಬ ತೃಪ್ತಿ ನನಗಿದೆ’ ಎನ್ನುತ್ತಾರೆ ಅವರು. ವನ್ಯಜೀವಿಗಳಿಗೆ ಅನುಕೂಲ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರನ್ನು ಅರಸಿ ಜನವಸತಿ ಪ್ರದೇಶಕ್ಕೆ ಬಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ದೃಶ್ಯ ಹತ್ತು ವರ್ಷಗಳ ಹಿಂದೆ ಲೋಂಡಾ ಅರಣ್ಯ ವಲಯದಲ್ಲಿ ಕಂಡುಬರುತ್ತಿತ್ತು. ಅರಣ್ಯ ಇಲಾಖೆಯವರು ಕರಂಜಾಳ ಕೆರೆಯನ್ನು ನಿರ್ಮಿಸಿದ ಬಳಿಕ ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ಬರುವ ಪ್ರಸಂಗಗಳು ಕಡಿಮೆಯಾಗಿವೆ‘ ಎನ್ನುತ್ತಾರೆ ಇಲ್ಲಿನ ಪರಿಸರವಾದಿ ಎಂ.ಜಿ ಬೆನಕಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.