ಅಥಣಿ (ಬೆಳಗಾವಿ ಜಿಲ್ಲೆ): ‘ಲೋಕಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಹಳಬರು, ಹೊಸಬರು ಎನ್ನದೇ ನಾವು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದೆವು. ದಾರಿಹೋಕರ ಮಾತು ಆಲಿಸಿ ಸಚಿವರು ಶಾಸಕ ಲಕ್ಷ್ಮಣ ಸವದಿ ಅವರ ವಿರುದ್ಧ ಆರೋಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ಲಕ್ಷ್ಮಣ ಸವದಿ ಬೆಂಬಲಿಗರ ತಂಡದೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಸತೀಶ ಜಾರಕಿಹೊಳಿ ತಮ್ಮ ಹೇಳಿಕೆ ಹಿಂಪಡೆಯಲಿ. ಪ್ರಿಯಾಂಕಾ ಜಾರಕಿಹೊಳಿ ಅವರು ಗೆದ್ದ ಬಳಿಕ ಸತೀಶ ಅವರು ಆರೋಪಿಸುತ್ತಿದ್ದಾರೆ. ಇಂತ ಹೇಳಿಕೆಗಳಿಂದ ತಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳಬಾರದು’ ಎಂದರು.
ಕಾಂಗ್ರೆಸ್‌ನ ತೆಲಸಂಗ ಬ್ಲಾಕ್ ಅಧ್ಯಕ್ಷ ಎ.ಎಂ.ಖೊಬ್ರಿ ಮಾತನಾಡಿ, ‘ಸಚಿವರು ಅನಗತ್ಯವಾಗಿ ಸಂಶಯಪಟ್ಟು ಹಗಲಿರುಳು ದುಡಿದ ಕಾರ್ಯಕರ್ತರಿಗೆ ನೋವಾಗುವಂತೆ ಮಾತನಾಡಿ, ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ’ ಎಂದರು.
‘ಹಿಂದಿನ ಬಹುತೇಕ ಚುನಾವಣೆಗಳಲ್ಲೂ ಅಥಣಿ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದ್ದವು. ಈಗಲೂ ಹಾಗೆ ಆಗಿದೆ. ಲಕ್ಷ್ಮಣ ಸವದಿ ಬಹಿರಂಗವಾಗಿ ಬಿಜೆಪಿ ಪರ ನಿಂತಿದ್ದರೆ ಅಥಣಿ ಮತ್ತು ಕಾಗವಾಡ ಕ್ಷೇತ್ರ
ಗಳಲ್ಲಿ ಕನಿಷ್ಠ 75 ರಿಂದ 85 ಸಾವಿರ ಮತ ಬಿಜೆಪಿಗೆ ಹೋಗುತ್ತಿದ್ದವು’ ಎಂದು ಅಥಣಿ ಬ್ಲಾಕ್ ಮುಖಂಡ ಶಿವಾನಂದ ದಿವಾನಮಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.