ADVERTISEMENT

ಬೆಳಗಾವಿ ಅಭಿವೃದ್ಧಿಗೆ ತಡೆಯೊಡ್ಡಿದ ಶೆಟ್ಟರ್‌: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 5 ಮೇ 2024, 16:11 IST
Last Updated 5 ಮೇ 2024, 16:11 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಅಭಿವೃದ್ಧಿ ಯೋಜನೆಗಳು ಹುಬ್ಬಳ್ಳಿ ದಾಟಿ ಬೆಳಗಾವಿಗೆ ಬರದಂತೆ ತಡೆಯೊಡ್ಡುತ್ತ ಬಂದ, ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಿ, ಜನರೇ ಪಾಠ ಕಲಿಸುತ್ತಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹಿಂದಿನಿಂದಲೂ ಬೆಳಗಾವಿ ಅಭಿವೃದ್ಧಿಯ ವಿರೋಧಿ. ಸಾಧ್ಯವಾದಾಗಲೆಲ್ಲ ಬೆಳಗಾವಿಯಿಂದ ಯೋಜನೆಗಳನ್ನು ಕಿತ್ತುಕೊಂಡಿದ್ದಾರೆ. ಯಾವುದೇ ಯೋಜನೆಗಳು ಹುಬ್ಬಳ್ಳಿ ದಾಟಿ ಬೆಳಗಾವಿಗೆ ಬಾರದಂತೆ ತಡೆಯುತ್ತ ಬಂದಿದ್ದಾರೆ. ಈ ವಿಷಯ ಕುರಿತು ಬೆಳಗಾವಿಯ ಜನರು ಅನೇಕ ಬಾರಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಮತ್ತೆ ಅಂಥವರಿಗೆ ಮತ ನೀಡಬೇಡಿ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹೈಕೋರ್ಟ್ ಪೀಠ ಬೆಳಗಾವಿಯಲ್ಲಿ ಆಗಬಹುದಿತ್ತು. ಅದನ್ನು ತಡೆದರು. ಐಟಿ ಕಂಪನಿಗಳು ಒಂದೂ ಬೆಳಗಾವಿಯತ್ತ ಮುಖ ಮಾಡದಂತೆ ತಡೆದರು. ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಕಾಟಾಚಾರಕ್ಕೆ ಒಂದೆರಡು ಸಭೆ ಮಾಡಿದರೆ ಹೊರತು; ಏನನ್ನೂ ಸಾಧಿಸಲಿಲ್ಲ’ ಎಂದರು.

ADVERTISEMENT

‘ಅಭಿವೃದ್ಧಿಗೆ ಆದ್ಯತೆ ನೀಡದ ಶೆಟ್ಟರ್‌ ಮೋದಿ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ನಮಗೆ ಬೆಳಗಾವಿಯನ್ನು ಅಭಿವೃದ್ಧಿ ಮಾಡುವ ಸಂಸದ ಬೇಕು. ಜನರ ಕೈಗೆ ಸಿಗುವ ಸಂಸದ ಬೇಕು. ಹಾಗಾಗಿ ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಗೆಲ್ಲಿಸಲು ನಿರ್ಧರಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.