ADVERTISEMENT

ಸಿ.ಎಂ ಯಾರು ಎಂಬುದು ಈಗ ಅಪ್ರಸ್ತುತ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 11:01 IST
Last Updated 28 ಜೂನ್ 2024, 11:01 IST
   

ಬೆಳಗಾವಿ: ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನ ಎರಡು ಕಣ್ಣುಗಳು. ಮುಖ್ಯಮಂತ್ರಿ ಯಾರು ಆಗಬೇಕು ಎಂಬುದು ಈಗ ಅ‍ಪ್ರಸ್ತುತ. ಎಲ್ಲವನ್ನೂ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಕ್ಕಲಿಗ ಸಮುದಾಯದ ಕೆಲ ಸ್ವಾಮೀಜಿಗಳು ಲಾಬಿ ನಡೆಸಿದ ಬಗ್ಗೆ ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವೆ, ‘136 ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಮಾಡಲಾಗಿದೆ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ನಮ್ಮ ‘ಮಾಸ್‌ ಲೀಡರ್‌’. ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ದುಡಿದಿದ್ದಾರೆ. ಕೊರೊನಾ ಸಂದರ್ಭದಲ್ಲೂ ಅವರು ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್‌ ಹೆಬ್ಬಾಳಕರ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ ಸಚಿವೆ, ‘ಯುದ್ಧದಲ್ಲಿ ಸೋತು ಶಸ್ತ್ರಾಸ್ತ್ರ ತ್ಯಾಗ ಮಾಡಿದಾಗ ಅದು ಸೋಲು. ರಾಜಕಾರಣದಲ್ಲಿ ಒಂದೇ ಸೋಲಿಗೆ ವಿಚಲಿತ ಆಗಬಾರದು. ನಮ್ಮ ಸೋಲಿಗೆ ಕಾರಣ ಕಂಡುಕೊಳ್ಳಬೇಕಿದೆ. ಅದಕ್ಕಾಗಿ ನಾನು ಮೌನವಾಗಿದ್ದೇನೆ’ ಎಂದರು.

‘ನೀವು ಉಪಮುಖ್ಯಮಂತ್ರಿ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ, ‘ನಾನು‌ ಮುಗಿಲಿಗೆ ಏಣಿ ಹಾಕುವಳಲ್ಲ’ ಎಂದರು.

‘ನಾನು ವಿಷಕನ್ಯೆಯಾದರೆ ಅವರು ಏನು?’

‘ವಿಷಕನ್ಯೆ’ ಎಂದು ಪದೇಪದೇ ಹೇಳುವ ಶಾಸಕ ರಮೇಶ ಜಾರಕಿಹೊಳಿ ಮಾತಿಗೆ ತಿರುಗೇಟು ನೀಡಿದ ಲಕ್ಷ್ಮಿ ಹೆಬ್ಬಾಳಕರ, ‘ನಾನು ವಿಷಕನ್ಯೆಯಾದರೆ ಅವರು ಏನು? ಅವರ ಸಂಸ್ಕೃತಿ ಎಂಥದ್ದು ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದರು.

‘ನಾನು ಹೆಸರಿಗಷ್ಟೇ ಲಕ್ಷ್ಮಿ. ನನ್ನ ಬಳಿ ಹಣ ಇಲ್ಲ. ಅವರಿಗೆ ‘ಸಾಹುಕಾರ’ ಎನ್ನುತ್ತಾರೆ. ಅವರ ಬಳಿ ಹಣವಿದೆ. ನಮ್ಮ ಬಳಿ ಎಲ್ಲಿದೆ? ನಾನು ಯಾರ ಬಳಿಯಾದರೆ ಹಣ ತೆಗೆದುಕೊಂಡಿದ್ದರೆ ದಾಖಲೆ ನೀಡಲಿ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರಿಂದ ಹಣ ವಸೂಲಿ ಮಾಡಲಾಗಿದೆ’ ಎಂದು ರಮೇಶ ಜಾರಕಿಹೊಳಿ ಚುನಾವಣೆ ಬಳಿಕ ಆರೋಪ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.