ಬೆಳಗಾವಿ: 'ಹತ್ತು ವರ್ಷಗಳಲ್ಲಿ ಪಡೆದಿರುವ ಪಿಎಚ್.ಡಿಗಳ ಗುಣಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನಗುಡ್ಡದ ಹೊಸ ನಿವೇಶನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡಗಳ ಭೂಮಿಪೂಜೆ ಹಾಗೂ ಶಿಲಾನ್ಯಾಸ ಮತ್ತು ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2ನೇ ಹಂತದ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರೆವೇರಿಸಿ ಅವರು ಮಾತನಾಡಿದರು.
'ಹತ್ತು ವರ್ಷಗಳಲ್ಲಿ ಆಗಿರುವ ಪಿಎಚ್.ಡಿಗಳ ವಿಶ್ಲೇಷಣೆ ಮಾಡಬೇಕು. ಅವುಗಳಿಂದ ಉಪಯೋಗ ಇದೆಯೇ, ಇಲ್ಲವೇ? ಅದನ್ನು ಎಲ್ಲಿಂದ ಕಟ್ ಅಂಡ್ ಪೇಸ್ಟ್ ಮಾಡಿದಾರೆ ಎನ್ನುವುದನ್ನು ವಿಮರ್ಶೆಗೆ ಒಳಪಡಿಸಬೇಕು' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ಚತ್ಥನಾರಾಯಣ ಅವರಿಗೆ ತಿಳಿಸಿದರು.
'ನನಗೆ ಯಾವುದಾದರೂ ಪಿಎಚ್.ಡಿ ಕೊಡಿ, ಅದನ್ನು ಎಲ್ಲಿಂದ ಕಾಪಿ ಮಾಡಿದ್ದಾರೆ ಎನ್ನುವುದನ್ನು ಹೇಳಬಲ್ಲೆ. ಪಿಎಚ್‌ಡಿಯಲ್ಲಿ ಸ್ವಂತಿಕೆ ಇರಬೇಕು. ಏನನ್ನೂಕೊಡುಗೆ ಕೊಡದಿದ್ದರೆ ಅದು ಎಂತಹ ಪಿಎಚ್‌ಡಿ? ಎಸ್ಸೆಸ್ಸೆಲ್ಸಿ ಹುಡುಗರೂ ಅದನ್ನು ಮಾಡುತ್ತಾರೆ' ಎಂದರು.
'ಆಮೂಲಾಗ್ರ ಬದಲಾವಣೆಯು ವಿ.ವಿ.ಗಳಲ್ಲಿ ಆಗಬೇಕಾಗಿದೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಬದ್ಧತೆ ಇಲ್ಲಿನವರಿಗೆ ಇರಬೇಕು. ವಿಭಿನ್ನವಾಗಿ ಮಾಡುವ ಧೈರ್ಯ ತಗೊಬೇಕು. ಸಮಕಾಲಿನ ಸಮಸ್ಯೆಗಳನ್ನು ಎದುರಿಸಲು ಸರ್ಕಾರದಿಂದ ಮಾತ್ರವೇ ಸಾಧ್ಯವಾಗುವುದಿಲ್ಲ. ಕೇವಲ ಪ್ರಮಾಣಪತ್ರ ಕೊಡುವ ಕೆಲಸವನ್ನಷ್ಟೆ ವಿ.ವಿ.ಗಳು ಮಾಡುತ್ತಿವೆ. ಸಾಮಾಜಿಕವಾಗಿ ಚಿಂತನೆ ಮಾಡುವ ಕೆಲಸವನ್ನು ನಿರ್ವಹಿಸಬೇಕು' ಎಂದು ಆಶಿಸಿದರು.
'ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ತಂತ್ರಜ್ಞಾನ ಬದಲಾಗುತ್ತಿದೆ. ತಂತ್ರಾಶಗಳಲ್ಲೂ ಬಹಳಷ್ಟು ಮುಂದೆ ಹೋಗಿದ್ದೇವೆ. ಹೀಗಾಗಿ ವಿ.ವಿ.ಗಳು ಜೀವಂತಿಕೆಯ ಸಂದೇಶವಾಗಬೇಕು ಹಾಗೂ ಆವಿಷ್ಕಾರದ ಕೇಂದ್ರಗಳಾಗಬೇಕು' ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಧೈರ್ಯವಾಗಿ ಮುನ್ನುಗ್ಗಲುಜ್ಞಾನದ ಬಲ ಕೊಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ವಿ.ವಿಯವರ ಮನೋಭಾವ ಬದಲಾಗಬೇಕು. ಕ್ಯಾಂಪಸ್‌ನಿಂದ ಹೊರಗಡೆ ಬಂದು ಜಗತ್ತು ನೋಡಬೇಕು. ಸ್ವಾಭಿಮಾನವನ್ನು ಉಳಿಸಿಕೊಳ್ಳುವಂತಹ ಸಂಶೋಧನೆಗಳನ್ನು ಮಾಡಬೇಕು. ಈ ವಿಷಯದಲ್ಲಿ ಕುಲಪತಿಗಳು ಸೇರಿದಂತೆ ವಿಶ್ವವಿದ್ಯಾಲಯದವರು ಚರ್ಚೆಗೆ ಬರಲಿ' ಎಂದು ಸವಾಲು ಹಾಕಿದರು.
'ವಿ.ವಿ. ಹಾಗೂ ಶಿಕ್ಷಣದಲ್ಲೂ ನಾಯಕತ್ವ ಮುಖ್ಯವಾದುದು. ಆರ್ ಸಿಯು ಅನ್ನು ಸಮಗ್ರ ಬದಲಾವಣೆ ಮಾಡಿ, ಸರ್ಕಾರ ನಿಮ್ಮ ಬೆನ್ನಿಗೆ ಇರುತ್ತದೆ' ಎಂದು ಅಭಯ ನೀಡಿದರು.
ಚನ್ನಮ್ಮನ ಹೆಸರಿನಲ್ಲಿರುವ ಈ ವಿ.ವಿ. ನನ್ನ ಹೃದಯಕ್ಕೆ ಹತ್ತಿರವಾದುದು. ಇದು ಆದರ್ಶವಾಗಿ ರೂಪುಗೊಳ್ಳಬೇಕು. ಕ್ಯಾಂಪಸ್ ಕಾಮಗಾರಿಯ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಸಂಪೂರ್ಣ ಡಿಜಿಟಲ್ ಆಗಿ ರೂಪಗೊಳ್ಳಬೇಕು ಎಂದು ಸೂಚಿಸಿದರು.
ಕಲಿಕೆ ವಿದ್ಯಾರ್ಥಿಗಳಲ್ಲೂ ಇರಬೇಕು; ಕಲಿಸುವವರಿಗೂ ಇರಬೇಕು. ಬೋಧಕರು, ಪ್ರಶ್ನಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಇಲ್ಲಿನ ಪರಿಸರ ವಿದ್ಯಾರ್ಜನೆಗೆ ಪೂರಕವಾಗಿ ಇರಬೇಕು. ಜ್ಞಾನದೇಗುಲ ಆಗಬೇಕು. ಕೆಲವು ವಿ.ವಿ.ಗಳಿಗೆ ಹೋದರೆ ಬ್ಯಾಂಕ್‌ಗೆ ಹೋದಂತೆ ಆಗುತ್ತದೆ. ಈ ಮಾತಿನಲ್ಲಿ ಹಲವು ಅರ್ಥಗಳಿವೆ ಎಂದಾಗ ಸಭಿಕರಿಂದ ಚಪ್ಪಾಳೆ ಮೊಳಗಿತು.
ಇದು ಭೂಮಿ ಅಥವಾ ಹಣ ಇದ್ದವರ ಶತಮಾನವಲ್ಲ. ಜ್ಞಾನ ಇದ್ದವರ ಶತಮಾನವಿದು. ವಿದೇಶಗಳ ತಂಡಗಳು ಹಿಂದೆ ವಿಧಾನಸೌಧಕ್ಕೆ ಬರುತ್ತಿದ್ದವು. ಈಗ ಬರುತ್ತಿಲ್ಲ. ಅವರು ಇನ್ಫೊಸಿಸ್ ಮೊದಲಾದ ಕ್ಯಾಂಪಸ್‌ಗಳಿಗೆ ಹೋಗುತ್ತಿದ್ದಾರೆ. ಈ ಬದಲಾವಣೆಯನ್ನು ವಿ.ವಿ.ಯವರು ಅರಿಯಬೇಕಾಗುತ್ತದೆ ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಇಲ್ಲಿಕುಡಿಯುವ ನೀರಿನ ಯೋಜನೆಗೆ ತೊಂದರೆ ಆಗದಂತೆ ಪರ್ಯಾಯ ಜಾಗ ಒದಗಿಸಲಾಗುವುದು. ಕಸ ವಿಲೇವಾರಿಗೆ ಹತ್ತು ಎಕರೆ ಕೊಡಲು ವಿವಿಯವರು ಸಹಾನುಭೂತಿಯಿಂದ ಪರಿಶೀಲಿಸಬೇಕು ಎಂದು ಸೂಚಿಸಿದರು.
ವಿ.ವಿ.ಗಳಲ್ಲಿ ವಸೂಲಿಬಾಜಿ ನಿಲ್ಲಬೇಕು. ಉತ್ಕೃಷ್ಟ ಮಟ್ಟದ ವಿದ್ಯೆ ದೊರೆಯಬೇಕು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, 'ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಗುಣಮಟ್ಟದ ಶಿಕ್ಷಣ ಕೊಡುವುದಕ್ಕಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸ್ವಂತ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ತ್ವರಿತವಾಗಿ ಜಾಗ ಒದಗಿಸಿ, ಕಟ್ಟಡ ನಿರ್ಮಾಣ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ' ಎಂದು ತಿಳಿಸಿದರು.
'ಪ್ರತಿ ವ್ಯಕ್ತಿಗೂ ಸಮಾನ ಬದುಕು ಸಿಗಬೇಕೆಂದರೆ ಅದು ಶಿಕ್ಷಣ ಹಾಗೂ ಕೌಶಲದಿಂದ ಮಾತ್ರ ಸಾಧ್ಯ' ಎಂದರು.
'ಆರ್‌ಸಿಯು ವಿಶ್ವ ದರ್ಜೆಯ ವಿಶ್ವವಿದ್ಯಾಲಯವಾಗಿ ಇದು ಬೆಳೆಯಬೇಕು ಎನ್ನುವುದು ನಮ್ಮ ಆಶಯವಾಗಿದೆ' ಎಂದು ನುಡಿದರು.
'ಆರು ವಿಶ್ವವಿದ್ಯಾಲಯಗಳನ್ನು ವಿಶೇಷವಾಗಿ ರೂಪಿಸಬೇಕು. ಈ ಭಾಗದ ಸವಾಲು- ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಾಯಕತ್ವ ಸಿಗುವಂತೆ ಆಗಬೇಕು ಎಂಬ ಉದ್ದೇಶವಿದೆ' ಎಂದರು.
'ಡಿಜಿಟಲ್ ಕಲಿಕೆ ಯೋಜನೆ ತರಲಾಗಿದೆ. ಸಮಗ್ರ ಕಲಿಕಾ ನಿರ್ವಹಣೆ ವ್ಯವಸ್ಥೆಯನ್ನು ವಿಶ್ವವಿದ್ಯಾಲಯಗಳಲ್ಲಿ ಮಾಡಲಾಗುತ್ತಿದೆ. ಯಾವ ಖಾಸಗಿ ವಿ.ವಿ.ಗಳಲ್ಲೂ ಈ ರೀತಿಯ ಸುಧಾರಣೆಯನ್ನು ಮಾಡಿಲ್ಲ' ಎಂದು ನುಡಿದರು.
'7 ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಸೂಪರ್ 30 ಕಾರ್ಯಕ್ರಮದಲ್ಲಿ ಗುಣಮಟ್ಟವನ್ನು ಹೆಚ್ಚಿಸಲಾಗುವುದು' ಎಂದು ವಿವರಿಸಿದರು.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗ್ರಾಮೀಣ ಮಕ್ಜಳು ಕೂಡ ಜಾಣರಿರುತ್ತಾರೆ. ಆದರೆ, ಅವರಿಗೆ ಅವಕಾಶ ಇರುವುದಿಲ್ಲ. ಈ ಕೊರತೆ ನೀಗಿಸಲು ಸರ್ಕಾರ ಮುಂದಾಗಿರುವುದು ಅಭಿನಂದನಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕ್ಷೇತ್ರ ಬಹಳ ಹಿಂದುಳಿದಿದೆ. ಕುಡಿಯುವುದಕ್ಕೆ ನೀರಿಲ್ಲದ ಸ್ಥಿತಿ ಹಲವು ಗ್ರಾಮಗಳಲ್ಲಿ ಇಂದಿಗೂ ಇದೆ. ₹ 382 ಕೋಟಿ ಯೋಜನೆಯನ್ನು ಕುಡಿಯುವ ನೀರಿನ ಯೋಜನೆಗೆ ತಂದಿದ್ದೇನೆ. ಅದಕ್ಕೆ ಜಾಗವನ್ನು ಬೇರೆ ಕಡೆ ಕೊಡಬೇಕು ಎಂದು ಕೋರಿದರು.
ವಿರೋಧ ಪಕ್ಷದ ಶಾಸಕಿ ಎಂಬ ಭಾವನೆ ನನಗೆ ಬಂದೇ ಇಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುದಾನ ಕೊಡುತ್ತಿದ್ದಾರೆ. ನನಗೆ ಎಂದಿಗೂ ಅನುದಾನದ ಕೊರತೆ ಉಂಟಾಗಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಸಾಬಣ್ಣ ತಳವಾರ, ಅರುಣ ಶಹಾಪುರ, ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ವಾತಿ ಇಟಗಿ,
ಮುಖ್ಯಮಂತ್ರಿ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರನಾಯಕ್, ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಡಾ.ವೀರನಗೌಡ ಬಿ. ಪಾಟೀಲ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಭಾಗವಹಿಸಿದ್ದರು.
ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.