ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ಸವದಿ, ಜಾರಕಿಹೊಳಿ ಸಹೋದರರು ಗೈರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 14:33 IST
Last Updated 21 ಆಗಸ್ಟ್ 2021, 14:33 IST

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರೂ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಎದ್ದುಕಂಡಿತು.

ಶಾಸಕ ಅಭಯ ಪಾಟೀಲ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು. ಆದರೆ, ಸಭೆಗೆ ಬರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಎಲ್ಲ ಸಭೆಗೂ ಎಲ್ಲರೂ ಬರಬೇಕೆಂದೇನಿಲ್ಲ. ಸವದಿ ಅವರೊಂದಿಗೆ ಶುಕ್ರವಾರ ಮಾತನಾಡಿದ್ದೆ. ಜಾರಕಿಹೊಳಿ ಸಹೋದರರೊಂದಿಗೂ ಚರ್ಚಿಸುತ್ತೇನೆ’ ಎಂದರು.

ADVERTISEMENT

ಮನವಿ ಸಲ್ಲಿಕೆ: ಗಡಿ ಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚಿಸಲು ಸುವರ್ಣ ವಿಧಾನಸೌಧದಲ್ಲಿ ಕನ್ನಡ ಹೋರಾಟಗಾರರ ಸಭೆ ಕರೆಯಬೇಕು ಎಂದು ಆಗ್ರಹಿಸಿ ಇಲ್ಲಿನ ಮುಖಂಡರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅಶೋಕ ಚಂದರಗಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಮೈನೋದ್ದೀನ್ ಮಕಾನದಾರ ಇದ್ದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪರವಾಗಿ ಪುಸ್ತಕಗಳನ್ನು ಅರ್ಪಿಸಲಾಯಿತು.

ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಗಿಲ ಯೋಗಿ ರೈತ ಸೇವಾ ಸಂಘದವರು ಮನವಿ ಸಲ್ಲಿಸಿದರು.

‘ಅತಿವೃಷ್ಟಿಯಿಂದ ಹಾನಿಗೊಳಗಾದ ಕಬ್ಬಿನ ಬೆಳೆಗೆ ಪರಿಹಾರ ಕೊಡಬೇಕು. ಹಾವು ಕಡಿತ ಹಾಗೂ ಸಿಡಿಲು ಬಡಿದು ಸಾವಿಗೀಡಾದ ಜಾನುವಾರಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಅತಿ ಸಣ್ಣ ರೈತರಿಗೆ ತುಂತುರು ನೀರಾವರಿ ಯೋಜನೆಗೆ ಸಹಾಯಧನ ಕೊಡಬೇಕು. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿನ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಪ್ರಕಾಶ ನಾಯಕ ಮುಖ್ಯಮಂತ್ರಿ ಕಾಲಿಗೆ ಬಿದ್ದು ಮನವಿ ಸಲ್ಲಿಸಿದರು. ಮುಖಂಡರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.