ADVERTISEMENT

ಕುಮಠಳ್ಳಿಯೊಂದಿಗೆ ಲಕ್ಷ್ಮಣ ಸವದಿಗೂ ಗೆಲುವು!

ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 19:30 IST
Last Updated 9 ಡಿಸೆಂಬರ್ 2019, 19:30 IST
ಮಹೇಶ ಕುಮಠಳ್ಳಿ
ಮಹೇಶ ಕುಮಠಳ್ಳಿ   

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಮಹೇಶ ಕುಮಠಳ್ಳಿ ಭರ್ಜರಿ ಗೆಲುವು ಸಾಧಿಸಿ ಪುನರಾಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಗಜಾನನ ಮಂಗಸೂಳಿ ಸೋಲು ಅನುಭವಿಸಿದ್ದಾರೆ. ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಕ್ಷದಲ್ಲಿ ತಮ್ಮ ‘ಪ್ರಾಬಲ್ಯ’ವನ್ನು ಹೆಚ್ಚಿಸಿಕೊಂಡಿದ್ದಾರೆ.

ಈ ಚುನಾವಣೆಯಲ್ಲಿ 99,203 ಮತಗಳನ್ನು ಗಳಿಸಿರುವ ಕುಮಠಳ್ಳಿ, 59,214 ಮತಗಳನ್ನು ಪಡೆದಿರುವ ಕಾಂಗ್ರೆಸ್‌ನ ಗಜಾನನ ವಿರುದ್ಧ 39,989 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಂತರದ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ (1,892) ಇದ್ದಾರೆ. ಅವರೂ ಸೇರಿದಂತೆ ಕಣದಲ್ಲಿದ್ದ ಆರು ಮಂದಿಯಿಂದ ಠೇವಣಿ ಉಳಿಸಿಕೊಳ್ಳವುದೂ ಸಾಧ್ಯವಾಗಿಲ್ಲ.

ಹೋದ ಚುನಾವಣೆಯಲ್ಲಿ ಸೋತಿದ್ದರೂ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿರುವ ಪಕ್ಷದ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು. ತಾವು ಪ್ರತಿನಿಧಿಸುತ್ತಿದ್ದ ಅಥಣಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಬಂದ ಕುಮಠಳ್ಳಿ ಅವರಿಗೆ ಬಿಟ್ಟು ಕೊಟ್ಟಿದ್ದಲ್ಲದೇ, ತಮ್ಮನ್ನು ಸೋಲಿಸಿದ ಅವರನ್ನು ಗೆಲ್ಲಿಸುವುದಕ್ಕೆ ಶ್ರಮಿಸುವ ಮೂಲಕ ಹೈಕಮಾಂಡ್‌ ಮಟ್ಟದಲ್ಲಿ ತಮ್ಮ ಸ್ಥಾನ ಸುಭದ್ರಗೊಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಕ್ಷೇತ್ರ ‘ತ್ಯಾಗ’ ಮಾಡಿರುವ ಅವರನ್ನು ಪಕ್ಷ ಹೇಗೆ ನಡೆಸಿಕೊಳ್ಳಲಿದೆ ಎನ್ನುವುದು ಕ್ಷೇತ್ರದ ಜನರ ಕುತೂಹಲವಾಗಿದೆ. ಅಲ್ಲದೇ, ಮಹೇಶ ಅವರಿಗೆ ಸಚಿವ ಸ್ಥಾನದ ನಿರೀಕ್ಷೆಯೂ ಜನರಲ್ಲಿ ಚಿಗುರೊಡೆದಿದೆ.

ADVERTISEMENT

ಬಿಜೆಪಿಗೆ ಗೆಲುವಿಗೆ ಪೂರಕವಾದುದು...

  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ ಮಂತ್ರಿ ಸ್ಥಾನದ ‘ಆಫರ್’ ಹಾಗೂ ಸವದಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ ಕೊಟ್ಟ ಭರವಸೆ.
  • ಅಧಿಕಾರದಲ್ಲಿರುವ ಪಕ್ಷದವರನ್ನೇ ಗೆಲ್ಲಿಸಿಕೊಳ್ಳೋಣ ಎಂಬ ಭಾವನೆ ಜನರಲ್ಲಿ ಬಂದದ್ದು.
  • ಕುಮಠಳ್ಳಿ ವೈಯಕ್ತಿಕ ವರ್ಚಸ್ಸಿನೊಂದಿಗೆ ಸವದಿ ವರ್ಚಸ್ಸು ಸೇರಿ ಒಟ್ಟು ಶಕ್ತಿ ದ್ವಿಗುಣಗೊಂಡಿದ್ದು.
  • ವ್ಯವಸ್ಥಿತವಾದ ಪ್ರಚಾರ ನಡೆಸಿದ್ದು ಮತ್ತು ಆರ್‌ಎಸ್‌ಎಸ್ ಸಹಕಾರ.
  • ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದು. ಜಾತಿವಾರು ಮತ ಬೇಟೆಗೆ ಕಾರ್ಯತಂತ್ರ. ಸಚಿವರಿಗೆ ಉಸ್ತುವಾರಿ.
  • ಕ್ಷೇತ್ರದಲ್ಲೇ ವಾಸ್ತವ್ಯವಿದ್ದುಕೊಂಡು ಯಡಿಯೂರಪ್ಪ ರೂಪಿಸಿದ ಕಾರ್ಯತಂತ್ರ.

ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದ್ದು...

  • ಹೊಸ ಮುಖವಾದ ಗಜಾನನ ಮಂಗಸೂಳಿ ಅವರಿಗೆ ಮೊದಲ ಚುನಾವಣೆ.
  • ಪಕ್ಷದ ಮೂವರು ಮುಖಂಡರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ನಂತರ ನಾಮಪತ್ರ ವಾಪಸ್‌ ಪಡೆದರೂ ಗೊಂದಲ ಉಂಟಾಗಿದ್ದು.
  • ಮುಖಂಡರಲ್ಲಿ ಒಗ್ಗಟ್ಟಿನ ಹಾಗೂ ಸ್ಥಳೀಯ ನಾಯಕತ್ವದಲ್ಲಿನ ಕೊರತೆ.
  • ಪ್ರತಿ ಸ್ಪರ್ಧಿ ಬಿಜೆಪಿಗೆ ಹೋಲಿಸಿದಲ್ಲಿ ಪ್ರಚಾರದಲ್ಲಿ ಹಿಂದಿದ್ದುದು.
  • ಕಾಂಗ್ರೆಸ್‌ ಗೆಲ್ಲಿಸಿದರೆ, ಬಿಜೆಪಿ ಸರ್ಕಾರದಲ್ಲಿ ಅನುದಾನ ತರಲು ಸಮಸ್ಯೆಯಾಗಬಹುದು ಎಂಬ ಭಾವನೆ ಜನರಲ್ಲಿ ಬಂದದ್ದು.
  • ಗ್ರಾಮೀಣ ಪ್ರದೇಶದಲ್ಲಿನ ಮತಗಳನ್ನು ಕೇಂದ್ರೀಕರಿಸಿ, ಪಟ್ಟಣದಲ್ಲಿನ ಜನರನ್ನು ಒಲಿಸಿಕೊಳ್ಳುವಲ್ಲಿ ಆದ್ಯತೆ ನೀಡದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.