ADVERTISEMENT

ಸಂಜಯ ಪಾಟೀಲರ ನನ್ನ ವಿರುದ್ಧದ ಹೇಳಿಕೆ ಇಡೀ ಸ್ತ್ರೀಕುಲಕ್ಕೇ ಅಪಮಾನ: ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 9:15 IST
Last Updated 14 ಏಪ್ರಿಲ್ 2024, 9:15 IST
<div class="paragraphs"><p>ಸಂಜಯ್ ಪಾಟೀಲ,&nbsp;ಲಕ್ಷ್ಮಿ ಹೆಬ್ಬಾಳಕರ</p></div>

ಸಂಜಯ್ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ

   

ಬೆಳಗಾವಿ: ‘ಸಂಜಯ ಪಾಟೀಲ ಅವರು ನನ್ನ ವಿರುದ್ಧ ನೀಡಿದ ಹೇಳಿಕೆ ಇಡೀ ಸ್ತ್ರೀ ಕುಲಕ್ಕೇ ಮಾಡಿದ ಅಪಮಾನ. ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡುವಾಗ ಬಿಜೆಪಿ ನಾಯಕರ ನಾಲಿಗೆ ಹಿಡಿತದಲ್ಲಿ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ನೀಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನೊಬ್ಬ ಮಹಿಳಾ ಸಚಿವೆ. ನಾನು ಇಡೀ ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸುತ್ತೇನೆ‌. ಸಂಜಯ ಪಾಟೀಲ ನನ್ನ ವಿರುದ್ಧ ಭಾಷಣ ಮಾಡುವಾಗ, ಅದೇ ವೇದಿಕೆಯಲ್ಲಿದ್ದ ಜಗದೀಶ ಶೆಟ್ಟರ್‌, ಮಂಗಲಾ ಅಂಗಡಿ ಸೇರಿದಂತೆ ಆ ಪಕ್ಷದ ಹಿರಿಯ ನಾಯಕರು ತಡೆಯಬಹುದಿತ್ತು’ ಎಂದರು.

ADVERTISEMENT

‘ಸಂಜಯ ಪಾಟೀಲ ಹೇಳಿಕೆಯಿಂದ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ಬಂದಿದೆ. ಅವರ ಹೇಳಿಕೆ ಧಿಕ್ಕರಿಸುವಂತೆ ರಾಜ್ಯದ ಮಹಿಳೆಯರಿಗೆಲ್ಲ ಕರೆ ನೀಡುತ್ತೇನೆ. ಇಡೀ ಸಮಾಜ ನನ್ನೊಂದಿಗೆ ಇದೆ. ಕಾಂಗ್ರೆಸ್ ನಾಯಕರೆಲ್ಲರೂ ನನ್ನ ಜತೆಗಿದ್ದಾರೆ’ ಎಂದರು.

‘ಬಿಜೆಪಿ ನಾಯಕರು ಸ್ತ್ರೀ ವಿರೋಧಿಗಳು. ಹಾಗಾಗಿ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ, ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ ಹೆಬ್ಬಾಳಕರ, ‘ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡ ಕೊಠಡಿಯಲ್ಲಿ ಕುಳಿತಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಕಷ್ಟ–ಸುಖದ ಬಗ್ಗೆ ಅರಿವಿಲ್ಲ. ಹಾಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದನ್ನು ಅವರು ನಿಲ್ಲಿಸಲಿ’ ಎಂದರು.

‘ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆಗಳಿಂದಾಗಿ ದಾರಿ ತಪ್ಪುತ್ತಿದ್ದಾರೆ’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ಹಿರಿಯರಾದ ಕುಮಾರಸ್ವಾಮಿ ಅವರು, ಯಾವ ಊರಿನ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಲಿ. ಹಳ್ಳಿ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಅವರು ನಿಲ್ಲಿಸಲಿ. ಯಾವುದೇ ಸ್ವಾರ್ಥಕ್ಕಾಗಿ ನಮ್ಮ ಪಕ್ಷದವರು ಈ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬದಲಿಗೆ, ಬಿಜೆಪಿ ಮನಸ್ಥಿತಿ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಿದೆ. ಸುಳ್ಳು ಹೇಳುವುದೇ ಬಿಜೆಪಿ ಅಜೆಂಡಾ’ ಎಂದು ಕಿಡಿಕಾರಿದರು.

‘ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಅದು ಸಾಕಾರವಾಗದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚುನಾವಣೆ ಮುಗಿದ ನಂತರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರ ಬಗ್ಗೆ ಪ್ರತಿಕ್ರಿಯಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.