ADVERTISEMENT

ತಂದೆಯಿಂದ ಕಾಟ: ಬಾಲಕಿ ರಕ್ಷಿಸಿದ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:06 IST
Last Updated 15 ನವೆಂಬರ್ 2024, 16:06 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಮದ್ಯವ್ಯಸನಿ ತಂದೆಯಿಂದ ತೊಂದರೆಗೆ ಒಳಗಾಗಿದ್ದ ಬಾಲಕಿಯೊಬ್ಬಳನ್ನು ಶುಕ್ರವಾರ ರಕ್ಷಿಸಿ, ಆಕೆಯ ಕಲಿಕೆಗೆ ಹಾಸ್ಟೆಲ್‌ ವ್ಯವಸ್ಥೆ ಮಾಡಿದರು.

ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಅಂಗನವಾಡಿ ಕಟ್ಟಡದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಸಚಿವೆ ಹೆಬ್ಬಾಳಕರ ಅವರನ್ನು ಭೇಟಿಯಾದ 12 ವರ್ಷದ ಬಾಲಕಿ ಸಮಸ್ಯೆ ಹೇಳಿ ಕಣ್ಣೀರು ಹಾಕಿದಳು. ಬಾಲಕಿಯ ಜೊತೆಗೆ ಅವಳ ಅಜ್ಜಿಯೂ ಪರಿಸ್ಥಿತಿ ಮನವರಿಕೆ ಮಾಡಿದರು.

‘ಅಪ್ಪ ಮದ್ಯವ್ಯಸನಿ ಆಗಿದ್ದು, ಅವ್ವನಿಗೆ ನಿತ್ಯವೂ ಹಿಂಸೆ ಕೊಡುತ್ತಿದ್ದ. ಬೇಸತ್ತ ತಾಯಿ ತವರು ಮನೆ ಸೇರಿದ್ದಾರೆ. ಹಿರೇಬಾಗೇವಾಡಿಯ ಖಾಸಗಿ ಶಾಲೆಯಲ್ಲಿ ನಾನು 6ನೇ ತರಗತಿ ಓದುತ್ತಿದ್ದೇನೆ. ಶಾಲೆ ಬಿಟ್ಟು ತಾಯಿ ಜತೆಗೆ ಹೋಗಲು ಆಗುತ್ತಿಲ್ಲ. ಎಲ್ಲಿಯಾದರೂ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಿ’ ಎಂದು ಬಾಲಕಿ ಕೋರಿದಳು.

ADVERTISEMENT

ಬಾಲಕಿಗೆ ಧೈರ್ಯ ಹೇಳಿದ ಲಕ್ಷ್ಮಿ ಹೆಬ್ಬಾಳಕರ ಅವರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜ ಹಾಗೂ ಮಕ್ಕಳ ರಕ್ಷಣಾಲಯದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದರು. ಸವದತ್ತಿ ಬಾಲಕಿಯರ ವಸತಿ ನಿಲಯದಲ್ಲಿ ಬಾಲಕಿ ಉಳಿದುಕೊಳ್ಳಲು ಮತ್ತು ಶಿಕ್ಷಣ ಮುಂದುವರಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಾಲಕಿಗೆ ಅಗತ್ಯವಾದ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಲು ಆರ್ಥಿಕ ನೆರವು ಒದಗಿಸಿದರು.

‘ಬಾಲಕಿ ಶಿಕ್ಷಣ, ಊಟ, ವಸತಿಗೆ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದೂ ಸಚಿವೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.