ಬೆಳಗಾವಿ: ‘ಪ್ರಸ್ತುತ ಸನ್ನಿವೇಶದಲ್ಲಿ ಇಂಗ್ಲಿಷ್ ಕಲಿಯಬೇಕು. ಆದರೆ, ಕನ್ನಡ ಮರೆಯಬಾರದು’ ಎಂದು ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಸಲಹೆ ನೀಡಿದರು.
ಇಲ್ಲಿನ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗದಿಂದ ಆಯೋಜಿಸಿದ್ದ ‘ಪ್ರಾಥಮಿಕ ಶಾಲಾ ಹಂತದಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಅನಿವಾರ್ಯವೆ?– ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಇಂಗ್ಲಿಷ್ ಹಾವಳಿಯಿಂದಾಗಿ ಕನ್ನಡ ದೇಸಿ ಶಬ್ದಗಳು ಮಾಯವಾಗುತ್ತಿವೆ. ಮಕ್ಕಳು ಮಾತೃ ಭಾಷೆಯಲ್ಲಿ ಗ್ರಹಿಸುವಷ್ಟು ಬೇರೆ ಭಾಷೆಯಲ್ಲಿ ಸಾಧ್ಯವಾಗದು. ಇಂಗ್ಲಿಷ್ ಬೇಡವೇ ಬೇಡ ಎಂದು ಹೇಳಲು ಬರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದ ವಿಷಯ ಬಂದಾಗ ಇಂಗ್ಲಿಷ್ ಜ್ಞಾನ ಅನಿವಾರ್ಯವಾಗುತ್ತದೆ. ಹಾಗೆಂದು ಕನ್ನಡವನ್ನು ಕಡೆಗಣಿಸಬಾರದು’ ಎಂದರು.
‘ಪ್ರಾಥಮಿಕ ಶಾಲಾ ಹಂತದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಅನಿವಾರ್ಯವಲ್ಲ. ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಹೇರುವುದು ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತಾಗುತ್ತದೆ. ತಾಯಿಯ ಹಾಲಿನಲ್ಲಿ ಔಷಧೀಯ ಗುಣಗಳು ಇರುವಂತೆ ಮಾತೃಭಾಷೆಯಲ್ಲೂ ವಿಶೇಷ ಶಕ್ತಿ ಇದೆ. ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದುಸಾಹಿತಿ ಪ್ರೊ.ಎಂ.ಎಸ್. ಇಂಚಲ ಹೇಳಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ವಿ.ಬಿ. ಹಿರೇಮಠ ಮಾತನಾಡಿ, ‘ಪ್ರಾಥಮಿಕ ಶಾಲಾ ಹಂತದಿಂದಲೇ ಇಂಗ್ಲಿಷ್ ಶಿಕ್ಷಣ ಅನಿವಾರ್ಯವಾಗಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಇಂಗ್ಲಿಷ್ ಮಹತ್ತರವಾದ ಪಾತ್ರ ವಹಿಸುತ್ತದೆ’ ಎಂದರು.
ಸಾಹಿತಿ ಎಲ್.ಎಸ್. ಶಾಸ್ತ್ರಿ ಮಾತನಾಡಿ, ‘ಇತ್ತೀಚೆಗೆ 6ಸಾವಿರ ಶಾಲೆಗಳು ಮುಚ್ಚಿವೆ. ಇದೊಂದು ರೀತಿ ಕನ್ನಡ ಭಾಷೆಯ ಕೊಲೆ ಮಾಡಿದಂತೆಯೇ ಸರಿ. ಒಂದು ಭಾಷೆಯ ಕೊಲೆಯೆಂದರೆ ಒಂದು ಸಂಸ್ಕೃತಿಯ ಕೊಲೆಯಾದಂತೆ. ಕನ್ನಡಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಹಲವು ದೇಶಗಳು ಇಂಗ್ಲಿಷ್ ಭಾಷೆ ಹಂಗಿಲ್ಲದೇ ಬದುಕುತ್ತಿಲ್ಲವೇ? ಇಂಗ್ಲಿಷ್‌ನಲ್ಲಿ ಶಿಕ್ಷಣ ಅನಿವಾರ್ಯವೇನಲ್ಲ’ ಎಂದು ಪ್ರತಿಪಾದಿಸಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಪಿ.ಬಿ. ಸ್ವಾಮಿ, ‘ಕೇವಲ ಶ್ರೀಮಂತರ ಪಾಲಾಗಿರುವ ಇಂಗ್ಲಿಷ್ ಭಾಷೆಯಲ್ಲಿ ಬಡವರೂ ಅಭ್ಯಾಸ ಮಾಡಲು ಅನಕೂಲವಾಗುವಂತೆ ಪ್ರಾಥಮಿಕ ಶಾಲಾ ಹಂತದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವುದು ಒಳ್ಳೆಯ ನಿರ್ಧಾರ’ ಎಂದರು.
ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಎಸ್.ವಿ. ದೀಕ್ಷಿತ್, ನಿವೃತ್ತ ಅಧಿಕಾರಿ ಸುರೇಶ ಹೆಗಡೆ, ಗುರುಸಿದ್ದಯ್ಯ ಹಿರೇಮಠ ಹಾಗೂ ಬಸವರಾಜ ತಳವಾರ ಅನಿಸಿಕೆಗಳನ್ನು ಹಂಚಿಕೊಂಡರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಮಾತನಾಡಿದರು. ಕೆ. ತಾನಾಜಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.