ADVERTISEMENT

ಬಿಜೆಪಿ, ಆರ್‌ಎಸ್‌ಎಸ್‌, ಪಂಚಾಚಾರ್ಯರು ತಮ್ಮ ನಿಲುವು ಸ್ಪಷ್ಟಪಡಿಸಲಿ: ಜಾಮದಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:27 IST
Last Updated 26 ಡಿಸೆಂಬರ್ 2023, 14:27 IST
<div class="paragraphs"><p>ಎಸ್‌.ಎಂ.ಜಾಮದಾರ</p></div>

ಎಸ್‌.ಎಂ.ಜಾಮದಾರ

   

ಬೆಳಗಾವಿ: ‘ಲಿಂಗಾಯತರು ಹಿಂದೂಗಳಲ್ಲ. ಜನಗಣತಿಯಲ್ಲಿ ಸಮಾಜದವರು ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಯಿಸಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಧಿವೇಶನದಲ್ಲಿ ಕೈಗೊಳ್ಳಲಾಗಿದೆ. ಇದರ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಂಚಾಚಾರ್ಯರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಒತ್ತಾಯಿಸಿದರು.

‘ವೀರಶೈವ ಮಹಾಸಭಾ ಸ್ಥಾಪನೆಯಾದ ದಿನದಿಂದ ರಾಜಕೀಯ ಅನುಕೂಲಕ್ಕೆ ತಕ್ಕಂತೆ ತನ್ನ ನಿಲುವು ಬದಲಿಸಿಕೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಅಧಿವೇಶನದಲ್ಲಿ ಪಂಚಪೀಠಗಳ ಪೈಕಿ ಮೂವರು ಪಂಚಾಚಾರ್ಯರು ಭಾಗವಹಿಸಿದ್ದ ಸಂದರ್ಭ ಅಂಗೀಕರಿಸಿದ ನಿರ್ಣಯಗಳನ್ನು ನಾವೂ ಸ್ವಾಗತಿಸುತ್ತೇವೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಇದೇ ಪಂಚಾಚಾರ್ಯರು 2017ರಲ್ಲಿ ಲಿಂಗಾಯತರ ಸ್ವತಂತ್ರ ಧರ್ಮ ಹೋರಾಟ ವಿರೋಧಿಸಿದ್ದರು. ‘ವೀರಶೈವವು ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದಿದ್ದರು. ಹೀಗಿರುವಾಗ ಅವರು ಈ ನಿರ್ಣಯ ಖಂಡಿಸುವರೇ? ಅದರ ವಿರುದ್ಧ ಹೋರಾಟ ನಡೆಸುವರೇ ಅಥವಾ ಸಮಸ್ತ ಲಿಂಗಾಯತರ ಭಾವನೆಗಳನ್ನು ಒಪ್ಪುವರೇ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘2017ರಲ್ಲಿ ನಮ್ಮ ಹೋರಾಟ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪಂಚಾಚಾರ್ಯರೊಂದಿಗೆ ಕೈಜೋಡಿಸಿದ್ದರು. ಆದರೆ, ದಾವಣಗೆರೆ ಅಧಿವೇಶನದಲ್ಲಿ ಅವರು ಮತ್ತು ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಷಣ ಮಾಡಿದ್ದಾರೆ. ಯಡಿಯೂರಪ್ಪ ಪುತ್ರಿಯೂ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಗಿದ್ದಾರೆ. ಅದಕ್ಕೆ ‘ಲಿಂಗಾಯತರು ಹಿಂದೂಗಳಲ್ಲ’ ಎಂಬ ನಿರ್ಣಯವನ್ನು ಯಡಿಯೂರಪ್ಪ ಒಪ್ಪುವರೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಬೇಕು’ ಎಂದರು.

‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಪಡೆಯುವುದಕ್ಕಾಗಿ 2017ರಲ್ಲಿ ನಾವು ಚಳವಳಿ ಕೈಗೊಂಡಾಗ, ಅದನ್ನು ವಿರೋಧಿಸಲು ವೀರಶೈವ ಮಹಾಸಭಾ, ಪಂಚಾಚಾರ್ಯರು ‍ಪ್ರತಿನಿಧಿಸುವ ಐದು ಮಠಗಳು ಮತ್ತು ಬಿಜೆಪಿ ಎನ್ನುವ ಮೂರು ಗುಂಪು ರಚನೆಯಾಗಿದ್ದವು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಲಿಂಗಾಯತ ಧರ್ಮ ಹೋರಾಟ ವಿರೋಧಿಸಿದ್ದರು’ ಎಂದರು.

‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಪಡೆಯುವ ಚಳವಳಿ ಮುಂದುವರಿದಿದೆ. ಸರ್ಕಾರದ ಗಮನ ಸೆಳೆಯಲು ಈಗ ನಾವು ಬೀದಿಗಿಳಿಯುವುದಿಲ್ಲ. ಆದರೆ, ವಿಭಿನ್ನ ವಿಧಾನ ಅನುಸರಿಸುತ್ತೇವೆ. ಸ್ವತಂತ್ರ ಧರ್ಮ ಸ್ಥಾನಮಾನದ ಬೇಡಿಕೆಗೆ ಸಂಬಂಧಿಸಿ 2018ರಲ್ಲಿ ಬರೆದ ಕೇಂದ್ರದ ಪತ್ರಕ್ಕೆ ರಾಜ್ಯ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.